'ಸಾಯಂಗಿದ್ರೆ ಬಸ್ಸಿಗೆ ಸಿಕ್ಕಾಕೊಂಡು ಸಾಯಬೇಕಿತ್ತು, ನನ್ನ ಕಾರು ಡ್ಯಾಮೇಜ್ ಮಾಡೋಕೆ ನೀನ್ಯಾವನು?'
ತನ್ನ ಕಾರಿಗೆ ಢಿಕ್ಕಿ ಹೊಡೆದ ಬೈಕ್ ಸವಾರನಿಗೆ ಭವಾನಿ ರೇವಣ್ಣ ತರಾಟೆ, ಅವಾಚ್ಯ ನಿಂದನೆ: ವೀಡಿಯೊ ವೈರಲ್
ಮೈಸೂರು, ಡಿ.4: ಬೈಕೊಂದು ತನ್ನ ಕಾರಿಗೆ ಢಿಕ್ಕಿ ಹೊಡೆದಿದ್ದರಿಂದ ಆಕ್ರೋಶಗೊಂಡ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪತ್ನಿ, ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಬೈಕ್ ಸವಾರನನ್ನು ಅವಾಚ್ಯವಾಗಿ ನಿಂದಿಸಿ ಹಿಗ್ಗಾಮುಗ್ಗಾ ತರಾಟೆಗೈದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ರವಿವಾರ ವೈರಲ್ ಆಗಿದೆ.
ಭವಾನಿ ರೇವಣ್ಣ ಅವರು ಸಾಲಿಗ್ರಾಮದಿಂದ ಹೊಳೆನರಸೀಪುರಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಾಂಪುರ ಗ್ರಾಮದ ಗೇಟ್ ಬಳಿ ಈ ಘಟನೆ ನಡೆದಿದೆ. ವಿರುದ್ಧ ದಿಕ್ಕಿನಿಂದ ಬೈಕ್ ಭವಾನಿ ರೇವಣ್ಣರ ಕಾರಿಗೆ ಢಿಕ್ಕಿ ಹೊಡೆದಿದೆ. ಇದರಿಂದ ಕೆಂಡಾಮಂಡಲವಾದ ಭವಾನಿ, ‘ಸುಟ್ರು ಹಾಕ್ರೋ ಈ ಗಾಡಿನ’ ಎಂದು ಅವಾಚ್ಯ ಶಬ್ದಗಳಿಂದ ರೇಗಾಡಿದ್ದಾರೆ. ‘ಅಂತಹ ಅರ್ಜೆಂಟ್ ಏನಿತ್ತು? ಗಾಡಿಗೆ ಎಷ್ಟು ಡ್ಯಾಮೇಜ್ ಆಗಿದೆ, ರೆಡಿ ಮಾಡಿಸುವುದು ಹೇಗೆ?’ ಎಂದು ಸಿಟ್ಟಿನಿಂದ ತರಾಟೆಗೈದಿದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿದ ಸ್ಥಳೀಯರ ಮೇಲೂ ರೇಗಿದ ಭವಾನಿ ರೇವಣ್ಣ, ‘ರಿಪೇರಿ ಮಾಡ್ಸಕ್ಕೇ ಕೊಡ್ತಿಯಾ ಐದು ಲಕ್ಷ ರೂ.? ಹಣ ಕೊಡಂಗಿದ್ರೆ ನ್ಯಾಯ ಮಾತಾಡಕ್ಕ್ ಬನ್ನಿ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಸುಮ್ಮನಾಗದ ಭವಾನಿ ರೇವಣ್ಣ, ಅಪಘಾತಕ್ಕೆ ಕಾರಣವಾದ ಬೈಕ್ ಸವಾರನ ಮೊಬೈಲ್ ಫೋನ್ ಕಸಿದುಕೊಂಡು, ಗಾಡಿ ಸೀಜ್ ಮಾಡು. ಸಾಲಿಗ್ರಾಮ ಎಸ್ಸೈ ಬರೋಕೆ ಹೇಳಿ’ ಎಂದು ಸಹಾಯಕರಿಗೆ ತಿಳಿಸಿರುವುದು ವೀಡಿಯೊದಲ್ಲಿದೆ.
''1.50 ಕೋಟಿ ರೂ. ಗಾಡಿ ಇದು. ಡ್ಯಾಮೇಜ್ ಮಾಡಿಟ್ಟವ್ನಲ್ಲ, ದೇಶ ಮುಳುಗಿ ಹೋಗಿತ್ತಾ, ರೈಟಲ್ಲಿ ಬಂದು ಗುದ್ದಿದ್ದೀಯಲ್ಲಾ. ಸಾಯಂಗಿದ್ರೆ ಬಸ್ಸಿಗೆ ಸಿಕ್ಕಾಕೊಂಡು ಸಾಯಬೇಕಿತ್ತು. ನನ್ನ ಕಾರು ಡ್ಯಾಮೇಜ್ ಮಾಡೋಕೆ ನೀನ್ಯಾವನು?’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಅವ್ನು ಸತ್ತೋಯ್ತನೆ ಅಂತ, ಅವ್ನ್ ಬಗ್ಗೆ ಯೋಚ್ನೆ ಮಾಡ್ತಾ ಇದ್ದೀಯಲ್ಲಾ, ಒಂದೂವರೆ ಕೋಟಿ ರೂಪಾಯಿ ಗಾಡಿ ಡ್ಯಾಮೇಜ್ ಯಾರ್ ಕಟ್ಕೊಡ್ತಾರೆ?’ ಎಂದೂ ಸ್ಥಳೀಯರ ಮೇಲೂ ವಾಗ್ದಾಳಿ ಮಾಡಿದ್ದಾರೆ.
ಕೊನೆಗೆ ಬೈಕ್ ಸವಾರ ಹಾಗೂ ಜೊತೆಗಿದ್ದವರನ್ನು ಕಾರು ಹಾಗೂ ದ್ವಿಚಕ್ರ ವಾಹನದ ಬಳಿ ನಿಲ್ಲಿಸಿ ತಮ್ಮ ಮೊಬೈಲ್ ಫೋನ್ ನಲ್ಲಿ ಫೋಟೊ ತೆಗೆದುಕೊಂಡಿದ್ದಾರೆ.
ಘಟನೆಯ ಬಗ್ಗೆ ಬೈಕ್ ಸವಾರನ ವಿರುದ್ಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.