ಬೀದರ್: ತಲೆ ಮರೆಸಿಕೊಂಡಿದ್ದ ಎಮ್ಮೆ ಕಳವು ಪ್ರಕರಣದ ಆರೋಪಿ 58 ವರ್ಷಗಳ ನಂತರ ಬಂಧನ!
ಬಂಧಿತ ಆರೋಪಿ
ಹುಲಸೂರ: 58 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಎಮ್ಮೆ ಕಳವು ಪ್ರಕರಣದ ಆರೋಪಿಯನ್ನು ಮೆಹಕರ್ ಠಾಣೆ ಪೊಲೀಸರು ಸೋಮವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಣಪತಿ ವಿಠ್ಠಲ ವಾಗ್ದಾರೆ(77) 58 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯಾಗಿದ್ದಾನೆ.
1965ರಲ್ಲಿ ದಾಖಲಾಗಿದ್ದ ಪ್ರಕರಣ
ಮುರಳೀಧರ ಕುಲಕರ್ಣಿ ಎಂಬುವರು ತಮ್ಮ ಎರಡು ಎಮ್ಮೆ ಹಾಗೂ ಒಂದು ಎಮ್ಮೆ ಕರು ಕಳುವಾಗಿರುವ ಬಗ್ಗೆ 1965ರಲ್ಲಿ ಮೆಹಕರ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ದಾಖಸಿಕೊಂಡ ಪೊಲೀಸರು ಕಿಶನ್ ಚಂದ್ರ ಎಂಬಾತನನ್ನು ಬಂಧಿಸಿದ್ದರು. ಕಿಶನ್ ಚಂದ್ರ 2020ರಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ನ್ಯಾಯಾಲಯಕ್ಕೆ ಮೃತಪಟ್ಟಿರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಲಾಗಿತ್ತು. ಆದರೆ, ಇನ್ನೊಬ್ಬ ಆರೋಪಿ ಗಣಪತಿ ತಲೆಮರೆಸಿಕೊಂಡಿದ್ದ.
ಇದೀಗ ತಲೆಮರೆಸಿಕೊಂಡಿದ್ದ ಇನ್ನೊಬ್ಬ ಆರೋಪಿ ಗಣಪತಿ ವಿಠಲ ವಾಗ್ಮೋರೆಯನ್ನು ಮಹಾರಾಷ್ಟ್ರದ ಲಾತೂರ ಜಿಲ್ಲೆಯ ಟಾಕಳಗಾಂವ್ ಗ್ರಾಮದಲ್ಲಿ ನಿನ್ನೆ (ಸೆ.11) ಮೇಹಕರ ಠಾಣೆ ಪಿಎಸ್ಐ ಶಿವಕುಮಾರ ಮತ್ತು ಚಂದ್ರಶೇಖರ ಬಂಧಿಸಿದ್ದಾರೆ. ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅಧಿಕಾರಿ, ಸಿಬ್ಬಂದಿಗೆ ಪ್ರಶಂಸನಾ ಪತ್ರ ಹಾಗೂ ಬಹುಮಾನ ನೀಡಲಾಗಿದೆ.
ʼʼಸುಮಾರು ವರ್ಷಗಳಿಂದ ಬಾಕಿ ಇರುವ ಪ್ರಕರಣಗಳು, ಆರೋಪಿಗಳು ಕೋ೯ಗೆ ಹಾಜರಾಗದೇ ಇರುವ ಎಲ್ ಪಿಆರ್ ಪ್ರಕರಣಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಈ ತಂಡವು ಇದೀಗ 58 ವರ್ಷಗಳ ಬಳಿಕ ಆರೋಪಿಯನ್ನು ಪತ್ತೆ ಮಾಡಿರುವುದು ಸೇರಿ ಒಟ್ಟು 7 ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆʼʼ
- ಚನ್ನಬಸವಣ್ಣ ಎಸ್.ಎಲ್., ಎಸ್ಪಿ,