‘ಯಾರು ಅತಿ ದೊಡ್ಡ ಅಪಶಕುನ?’ ಎಂದು ರಾಹುಲ್ ಗಾಂಧಿಯನ್ನು ವ್ಯಂಗ್ಯವಾಡಿದ ಸಿ.ಟಿ. ರವಿ
ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಭಾರೀ ಮುನ್ನಡೆ
ಸಿ.ಟಿ.ರವಿ
ಬೆಂಗಳೂರು: ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢ ರಾಜ್ಯಗಳಲ್ಲಿ ಬಿಜೆಪಿ ಭಾರಿ ಗೆಲುವಿನತ್ತ ದಾಪುಗಾಲು ಹಾಕುತ್ತಿದ್ದಂತೆಯೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಬಿಜೆಪಿ ನಾಯಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
“ಯಾರು ಅತಿ ದೊಡ್ಡ ಅಪಶಕುನ(ಪನೌತಿ)” ಎಂದು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಸಿ.ಟಿ.ರವಿ, ತಮ್ಮ ಪೋಸ್ಟ್ ನೊಂದಿಗೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷವನ್ನು ಟ್ಯಾಗ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕುರಿತು ‘ಅಪಶಕುನ’ ಎಂಬ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ಸಿ.ಟಿ.ರವಿ ಇಂತಹ ಪೋಸ್ಟ್ ಮಾಡಿದ್ದಾರೆ.
ಇದಕ್ಕೂ ಮುನ್ನ, ರಾಜಸ್ಥಾನದ ಬಾರ್ಮರ್ ನಲ್ಲಿ ನಡೆದಿದ್ದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ಪ್ರಧಾನಿ ಅವರು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದುದರಿಂದಾಗಿಯೇ ಭಾರತ ತಂಡವು ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿತು ಎಂದು ವ್ಯಂಗ್ಯವಾಡಿದ್ದರು.
“ನಮ್ಮ ಹುಡುಗರು ಬಹುತೇಕ ವಿಶ್ವಕಪ್ ಜಯಿಸುವುದರಲ್ಲಿದ್ದರು. ಆದರೆ, ಅಪಶಕುನ ಅವರು ಸೋಲುವಂತೆ ಮಾಡಿತು” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು.
ಇಂದು (ರವಿವಾರ) ನಡೆಯುತ್ತಿರುವ ನಾಲ್ಕು ರಾಜ್ಯಗಳ ಮತ ಎಣಿಕೆಯ ಆರಂಭದಲ್ಲಿ ಮೂರು ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್, ಮತ ಎಣಿಕೆ ಕಾರ್ಯ ಪ್ರಗತಿಯಾಗುತ್ತಿದ್ದಂತೆಯೆ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢದಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ತೆಲಂಗಾಣದಲ್ಲಿ ಮಾತ್ರ ಸ್ಪಷ್ಟ ಗೆಲುವಿನತ್ತ ಸಾಗಿದೆ.