ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್; ಸಿಬಿಐ ತನಿಖೆಗೆ ಹೈಕೋರ್ಟ್ ನಕಾರ

ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಪತ್ನಿ ಪಾರ್ವತಿಗೆ ಸೈಟ್ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ಮುಡಾ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದೆ. ಆ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಕಾಯ್ದಿರಿಸಿದ್ದ ತೀರ್ಪು ಪ್ರಕಟಿಸಿದ ಹೈಕೋರ್ಟ್, ಲೋಕಾಯುಕ್ತ ತನಿಖೆಯಲ್ಲಿ ಯಾವುದೇ ಲೋಪದೋಷಗಳು ಕಂಡು ಬಂದಿಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿ ಸಿಬಿಐಗೆ ತನಿಖೆ ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ.
ಮುಡಾ ಕೇಸ್ ನಲ್ಲಿ ಮೂರು ಪ್ರಶ್ನೆಗಳನ್ನು ನಿಗದಿಪಡಿಸಿರುವ ಹೈಕೋರ್ಟ್, ಲೋಕಾಯುಕ್ತ ಪೊಲೀಸರು ಸ್ವತಂತ್ರ ತನಿಖಾ ಸಂಸ್ಥೆಯೇ ಎಂಬ ಪ್ರಶ್ನೆಗೆ ಉತ್ತರಿಸಿದೆ. ಲೋಕಾಯುಕ್ತ ಪೊಲೀಸರು ಸ್ವತಂತ್ರ ತನಿಖಾ ಸಂಸ್ಥೆ ಎಂದ ಹೈಕೋರ್ಟ್ ಪ್ರಕರಣವನ್ನು ಸಿಬಿಐಗೆ ವಹಿಸಲು ನಿರಾಕರಿಸಿದೆ.
ಹೈಕೋರ್ಟ್ ತೀರ್ಪಿನ ವಿವರ :
ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸರು ನಡೆಸುತ್ತಿಲ್ಲ, ಬದಲಿಗೆ ಲೋಕಾಯುಕ್ತ ಸಂಸ್ಥೆಯ ಅಂಗವಾದ ಲೋಕಾಯುಕ್ತ ಪೊಲೀಸರು ನಡೆಸುತ್ತಿದ್ದಾರೆ. ಇವರು ಎಡಿಜಿಪಿ ಹಾಗೂ ಲೋಕಾಯುಕ್ತರಿಗೆ ಉತ್ತರದಾಯಿಗಳಾಗಿದ್ದಾರೆ. ಲೋಕಾಯುಕ್ತ ಕಾಯ್ದೆಯಲ್ಲಿಯೇ ರಾಜಕೀಯ ಹಸ್ತಕ್ಷೇಪದಿಂದ ರಕ್ಷಣೆಯಿದೆ. ಇದನ್ನು ಸುಪ್ರೀಕೋರ್ಟ್ ಕೂಡಾ ಗುರುತಿಸಿದೆ. ಮುಖ್ಯಮಂತ್ರಿ ಸೇರಿದಂತೆ ಉನ್ನತ ಹುದ್ದೆಯಲ್ಲಿರುವವರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿದ್ದ ಇತಿಹಾಸ ಲೋಕಾಯುಕ್ತ ಸಂಸ್ಥೆಗಿದೆ. ಹಿಂದೆ ಸರಿಯಾಗಿತ್ತು, ಈಗ ತಪ್ಪಿದೆ ಎನ್ನಲು ಕಾರಣಗಳಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಹೈಕೋರ್ಟ್ ಆದೇಶದ ಮೂಲಕ ಲೋಕಾಯುಕ್ತ ಸಂಸ್ಥೆಯ ಮೇಲಿನ ಜನರ ವಿಶ್ವಾಸವನ್ನು ಕುಂದಿಸಲಾಗದು. ಎಫ್ಐಆರ್ ದಾಖಲಾಗುವ ಮುನ್ನವೇ ಅರ್ಜಿದಾರರು ಸಿಬಿಐ ತನಿಖೆ ಕೇಳುವುದರ ಔಚಿತ್ಯ ತಿಳಿಯುತ್ತಿಲ್ಲ. ಲೋಕಾಯುಕ್ತ ಪೊಲೀಸರು ತಮ್ಮ ತನಿಖೆಯಲ್ಲಿ ಅಗತ್ಯವಿರುವ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಸಂಬಂಧಿಸಿದವರೆಲ್ಲರ ಹೇಳಿಕೆ ದಾಖಲಿಸಿದ್ದಾರೆ. ಹೀಗಾಗಿ ತಾರತಮ್ಯಪೂರಿತ, ಕಳಪೆ ತನಿಖೆ ನಡೆಸಿದ್ದಾರೆಂದು ನನಗೆ ಕಂಡು ಬರುತ್ತಿಲ್ಲ. ಸಾರ್ವಜನಿಕ ಸೇವಕರು ಅನುಚಿತ ಲಾಭ ಪಡೆದು ತಪ್ಪಿಸಿಕೊಳ್ಳಬಾರದೆಂದು ಹೈಕೋರ್ಟ್ ತನಿಖೆ ಅಗತ್ಯವೆಂದು ಹೇಳಿತ್ತು. ಆದರೆ ಈಗ ಆ ಅನುಚಿತ ಲಾಭದ ಪ್ರಶ್ನೆ ದುರ್ಬಲವಾಗಿದೆ. ಹೀಗಾಗಿ ಸಿಬಿಐ ತನಿಖೆಗೆ ವಹಿಸಲು ಅರ್ಹ ಕಾರಣಗಳಿಲ್ಲವೆಂದು ಅರ್ಜಿಯನ್ನು ವಜಾಗೊಳಿಸುತ್ತಿದ್ದೇನೆ ಎಂದು ನ್ಯಾಯಪೀಠ ತಿಳಿಸಿದೆ.
ಹೈಕೋರ್ಟ್ ತೀರ್ಪಿನ ಬಳಿಕ ಮಾಧ್ಯಮದವರೊಂದಿಗೆ ಮಾತಾನಡಿದ ದೂರುದಾರ ಸ್ನೇಹಮಯಿ ಕೃಷ್ಣ, ʼಆದೇಶ ಪ್ರತಿ ಸಿಕ್ಕಿದ ಕೂಡಲೇ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುತ್ತೇನೆ. ಕಾನೂನು ಹೋರಾಟ ಮುಂದುವರಿಸುತ್ತೇವೆ. ಲೋಕಾಯುಕ್ತ ತನಿಖೆ ಬಗ್ಗೆ ನಮಗೆ ನಂಬಿಕೆ ಇಲ್ಲʼ ಎಂದು ಹೇಳಿದರು.