ಮುಡಾ ಪ್ರಕರಣ | ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿಗೆ ಲೋಕಾಯುಕ್ತ ಕ್ಲೀನ್ ಚಿಟ್
ನಾಳೆ ತನಿಖಾ ವರದಿ ಕೋರ್ಟ್ಗೆ ಸಲ್ಲಿಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿನ (ಮುಡಾ) ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸೇರಿದಂತೆ ನಾಲ್ವರ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆ ಇದ್ದು, ಆರೋಪ ಸಾಬೀತಾಗಿಲ್ಲ ಎಂದು ಲೋಕಾಯುಕ್ತ ದೃಢಪಡಿಸಿದ್ದು, ಈ ಸಂಬಂಧ ನಾಳೆ(ಫೆ.20) ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಲಿದ್ದಾರೆ.
ಬುಧವಾರ ಪ್ರಕರಣದ ದೂರುದಾರ, ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರಿಗೆ ನೀಡಿರುವ ನೋಟಿಸ್ನಲ್ಲಿ ಈ ಪ್ರಕರಣದ ತನಿಖಾಧಿಕಾರಿ ಟಿ.ಜೆ.ಉದೇಶ್ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಆಕ್ಷೇಪಣೆಗಳು ಇದ್ದಲ್ಲಿ ಒಂದು ವಾರದೊಳಗೆ ಸಂಬಂಧಿಸಿದ ಮ್ಯಾಜಿಸ್ಟ್ರೇಟ್ ಮುಂದೆ ಆಕ್ಷೇಪಣೆ ಸಲ್ಲಿಸುವಂತೆಯೂ ಉಲ್ಲೇಖ ಮಾಡಲಾಗಿದೆ.
ಮುಡಾದಿಂದ ನಿವೇಶನಗಳ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ.ಪಾರ್ವತಿ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ಇಲ್ಲಿನ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆ ಇದ್ದು, ಆರೋಪಗಳ ಸಾಬೀತಾಗಿಲ್ಲ. ಈ ಕುರಿತು ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಲಾಗುತ್ತಿದೆ ಎಂದೂ ಲೋಕಾಯುಕ್ತ ತಿಳಿಸಿದೆ.
2016ರಿಂದ 2024ರ ವರೆಗೆ ಮುಡಾದಿಂದ 50:50ರ ಅನುಪಾತದಲ್ಲಿ ಹಂಚಿಕೆ ಆಗಿರುವ ಪರಿಹಾರಾತ್ಮಕ ನಿವೇಶನಗಳ ಆರೋಪದ ಬಗ್ಗೆ ಹೆಚ್ಚುವರಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಹೆಚ್ಚುವರಿ ಅಂತಿಮ ವರದಿಯನ್ನು ಸಲ್ಲಿಸಲಾಗುತ್ತಿದೆ ಎಂದು ನೋಟಿಸ್ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.
ಏನಿದು ಪ್ರಕರಣ?: ಮೈಸೂರಿನ ದೇವನೂರು ಬಡಾವಣೆಯಲ್ಲಿ ದೇವನೂರು 3ನೆ ಹಂತದ ಬಡಾವಣೆ ಅಭಿವೃದ್ಧಿಗೆ ಸ್ವಾಧೀನಪಡಿಸಿಕೊಂಡಿದೆ ಎನ್ನಲಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾವರ್ತಿಗೆ ಸೇರಿದ ಮೈಸೂರಿನ ಕೆಸರೆ ಗ್ರಾಮದ ಸರ್ವೆ ನಂಬರ್ 464ರ 3 ಎಕರೆ 16 ಗುಂಟೆ ಜಮೀನಿನ ಬದಲಿಗೆ ಸುಮಾರು 56 ಕೋಟಿ ರೂ. ಮೌಲ್ಯದ 14 ನಿವೇಶನಗಳನ್ನು ಅಕ್ರಮವಾಗಿ ನೀಡಲಾಗಿದೆ.
ಅದರಲ್ಲಿ ಸಿಎಂ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು, ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ. ಆ ಸಂಬಂಧ ತನಿಖೆ, ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತೆ ಸ್ನೇಹಮಯಿ ಕೃಷ್ಣ ಸೇರಿ ಮೂವರು ಸಾಮಾಜಿಕ ಕಾರ್ಯಕರ್ತರು 2024ರ ಜೂನ್ನಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.
ರಾಜ್ಯಪಾಲರು ಪ್ರಕರಣದ ತನಿಖೆ, ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿ ಆ.17ರಂದು ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಲ್ಲಿಸಿದ್ದ ಅರ್ಜಿಯನ್ನು ಸೆ.24ರಂದು ಹೈಕೋರ್ಟ್ ತಿರಸ್ಕರಿಸಿತ್ತು. ಆ ಆದೇಶ ಹೊರಬಿದ್ದ ಬೆನ್ನಲ್ಲೇ ಮುಡಾ ಪ್ರಕರಣ ಸಂಬಂಧ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಎಫ್ಐಆರ್ ದಾಖಲಾದ ದಿನವೇ ಅಂದರೆ ಸೆ.27ರಂದು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸ್ನೇಹಮಯಿ ಕೃಷ್ಣ ಅರ್ಜಿ ಸಹ ಸಲ್ಲಿಸಿದ್ದರು.
ಆತ್ಮಸಾಕ್ಷಿ ಮಾರಿಕೊಳ್ಳಲಾಗಿದೆ: ಸ್ನೇಹಮಯಿ
ಈ ಪ್ರಕರಣದಲ್ಲಿ ಆತ್ಮಸಾಕ್ಷಿ ಮಾರಿಕೊಂಡ ಅಧಿಕಾರಿಗಳಷ್ಟೇ ಇಂತಹ ವರದಿ ನೀಡಲು ಸಾಧ್ಯ. ಪ್ರಭಾವಕ್ಕೆ ಒಳಗಾದ ತನಿಖಾಧಿಕಾರಿಗಳು, ಯಾವ ಸಾಕ್ಷ್ಯಾಧಾರಗಳು ಆರೋಪ ಸಾಬೀತಾಗಲು ಪೂರಕವಾಗಿವೆ ಎಂಬ ತಿಳಿವಳಿಕೆ ಇಲ್ಲದವರಂತೆ ನಡೆದುಕೊಳ್ಳುತ್ತಾರೆ ಎಂದು ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಬೇಸರ ವ್ಯಕ್ತಪಡಿಸಿದ್ದಾರೆ.