ಚಾರ್ಮಾಡಿ ಘಾಟ್ ನಲ್ಲಿ ಬೈಕ್- ಕಾರು ಅಪಘಾತ; ಪ್ರಕರಣ ದಾಖಲು
ಬೈಕ್ ಅಪಹರಿಸಲಾಗಿದೆ ಎಂಬ ವದಂತಿ ಬಗ್ಗೆ ದ.ಕ ಜಿಲ್ಲಾ ಪೊಲೀಸ್ ಇಲಾಖೆ ಸ್ಪಷ್ಟನೆ
ಬೆಳ್ತಂಗಡಿ; ಚಾರ್ಮಾಡಿ ಘಾಟಿಯ ಮೂರನೇ ತಿರುವಿನಲ್ಲಿ ಬೈಕ್ ಹಾಗೂ ಕಾರಿನ ನಡುವೆ ನಡೆದ ಅಫಘಾತದ ಬಳಿಕ ಬೈಕ್ ಸವಾರರು ಹಾಗೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ನಡುವೆ ಜಗಳ ನಡೆದಿದ್ದು ಇದೀಗ ಎರಡೂ ಕಡೆಯವರ ವಿರುದ್ದ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ನಿವಾಸಿ ಮನೋಜ್ (26) ಎಂಬವರು ನೀಡಿದ ದೂರಿನಲ್ಲಿ ತಾನು ಚಲಾಯಿಸುತ್ತಿದ್ದ ಬೈಕಿಗೆ ಕಾರು ಡಿಕ್ಕಿ ಹೊಡೆದಿದ್ದು ಅದಾದ ಬಳಿಕ ಮಾತುಕತೆ ನಡೆಯುತ್ತಿದ್ದ ವೇಳೆ ತನ್ನಮೇಲೆ ಕಾರಿನಿಂದ ಇಳಿದ ಇಬ್ಬರು ಹಲ್ಲೆ ನಡೆಸಿರುವುದಲ್ಲದೆ ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ಆರೋಪಿಸಲಾಗಿದೆ ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮತ್ತೊಂದೆಡೆ ಇದೇ ಘಟನೆಗೆ ಸಂಬಂಧಿಸಿದಂತೆ ಅರಸೀಕೆರೆ ನಿವಾಸಿ ಲೋಲಮ್ಮ ಎಂಬವರು ನೀಡಿರುವ ದೂರಿನಲ್ಲಿ ಬೈಕಿನಲ್ಲಿ ಬಂದವರು ಅಪಘಾತ ನಡೆಸಿದ್ದಲ್ಲದೆ ಬೈಕ್ ಸವಾರ ಹಾಗೂ ಸಹ ಸವಾರ ಸೇರಿ ಕಾರಿನಲ್ಲಿದ್ದ ಅವರ ಮಗ ಹಾಗೂ ಪತಿಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ದೂರನ್ನೂ ಸ್ವೀಕರಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದೇ ಘಟನೆಗೆ ಸಂಬಂಧಿಸಿತೆ ಅಪಘಾತವಾದ ಬೈಕನ್ನು ಕಾರಿನಲ್ಲಿ ಬಂದವರು ಕೊಂಡೊಯ್ದಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳ ಮೂಲಕ ವೈರಲ್ ಆಗಿತ್ತು ಆದರೆ ಅಂತಹ ಘಟನೆಗಳು ನಡೆದಿಲ್ಲ ಬೈಕ್ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಇರುವುದಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಾರ್ತಾಭಾರತಿ ಓದುಗರಿಗೆ ಶುಭಸುದ್ದಿ: ನಿಮ್ಮ ನೆಚ್ಚಿನ VB ಈಗ ವಾಟ್ಸ್ ಆ್ಯಪ್ ಚಾನೆಲ್ ನಲ್ಲೂ ಲಭ್ಯ
https://bit.ly/3tfd2Ro ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.