ಬಿಲ್ಕಿಸ್ ಬಾನು ಪ್ರಕರಣ| ಗುಜರಾತ್ ಸರಕಾರ ಆತ್ಮಸಾಕ್ಷಿ ಕಲಕುವ ಕೆಲಸ ಮಾಡಿತ್ತು: ದಿನೇಶ್ ಗುಂಡೂರಾವ್
ಬೆಂಗಳೂರು: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 11 ಅಪರಾಧಿಗಳನ್ನು ಗುಜರಾತ್ ಸರಕಾರ ಅವಧಿಪೂರ್ವವಾಗಿ ಬಿಡುಗಡೆ ಮಾಡುವ ಮೂಲಕ ಸಮಾಜದ ಆತ್ಮಸಾಕ್ಷಿಯನ್ನೆ ಕಲಕುವ ಕೆಲಸ ಮಾಡಿತ್ತು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸೋಮವಾರ ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ ಅವರು, 11 ಅಪರಾಧಿಗಳನ್ನು ಗುಜರಾತ್ ಸರಕಾರ ಅವಧಿಪೂರ್ವವಾಗಿ ಬಿಡುಗಡೆ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಸ್ವಾಗತಾರ್ಹ. ಈ ಪ್ರಕರಣದಲ್ಲಿ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದಲ್ಲದೆ, ಆಕೆಯ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.
ಒಂದು ಕಡೆ ಬೇಟಿ ಬಚಾವೋ, ಬೇಟಿ ಪಡಾವೋ., ಎಂದು ನಾಟಕ ಮಾಡುವ ಬಿಜೆಪಿ ನಾಯಕರು ಬಿಲ್ಕಿಸ್ ಬಾನು ಪ್ರಕರಣದಲ್ಲಿ ಆಕೆ ಒಂದು ಹೆಣ್ಣು ಮಗಳು ಎಂಬುದನ್ನು ಮರೆತು ಅಪರಾಧಿಗಳ ಬಿಡುಗಡೆಯನ್ನು ಸಂಭ್ರಮಿಸಿದ್ದರು.ಇದೀಗ ಸುಪ್ರೀಂ ಕೋರ್ಟ್‍ನ ಇಂದಿನ ತೀರ್ಪು ನ್ಯಾಯಾಂಗ ವ್ಯವಸ್ಥೆಯ ಮೇಲೆ ಇನ್ನೂ ನಂಬಿಕೆ ಉಳಿಸಿಕೊಳ್ಳಬಹುದು ಎಂಬ ಭಾವನೆ ಮೂಡಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.