ಬೆಂಗಳೂರಿನ ಮಹಿಳಾ ಪೋಸ್ಟ್ ಮಾಸ್ಟರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಲ್ ಗೇಟ್ಸ್
ಚಿತ್ರ- ಕುಸುಮಾ ಜೊತೆ ಬಿಲ್ ಗೇಟ್ಸ್
ಬೆಂಗಳೂರು, ಆ.22: ‘ಕುಸುಮಾ ಎಂಬ ಯುವತಿಯ ರೀತಿಯಲ್ಲಿ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಗಳು ತಮ್ಮ ಸಮುದಾಯದ ಜನರಿಗೆ ಹಣಕಾಸು ಸೇವೆ ಮಾತ್ರವಲ್ಲ, ಭರವಸೆಗಳನ್ನೂ ತಲುಪಿಸಬೇಕು’ ಎಂದು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ಗೇಟ್ಸ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಈ ಬಗ್ಗೆ ಬೆಂಗಳೂರಿನ ಕುಸುಮಾ ಎಂಬ ಮಹಿಳಾ ಪೋಸ್ಟ್ ಮಾಸ್ಟರ್ ಕುರಿತು ಬರೆದುಕೊಂಡಿರುವ ಅವರು, ‘ಭಾರತಕ್ಕೆ ನಾನು ಪ್ರವಾಸ ಹೋದ ಸಂದರ್ಭದಲ್ಲಿ, ಬದಲಾವಣೆಯ ಅದಮ್ಯ ಶಕ್ತಿಯನ್ನು ನಾನು ಭೇಟಿಯಾದೆ. ತನ್ನ ಸ್ಥಳೀಯ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುವ ಯುವತಿ ಕುಸುಮಾ ಅವರೇ ಆ ಶಕ್ತಿ.
‘ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಕುಸುಮಾರಂತಹ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ಗಳು ಸ್ಮಾರ್ಟ್ ಫೋನ್ ಸಾಧನ ಹಾಗು ಬಯೋಮೆಟ್ರಿಕ್ಸ್ ಬಳಸಿ ಭಾರತದಾದ್ಯಂತ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದ್ದಾರೆ. ಕುಸುಮಾ ಸಮಗ್ರ ಹಣಕಾಸು ಸೇವೆ ಒದಗಿಸುತ್ತಿರುವುದು ಮಾತ್ರವಲ್ಲ, ಆಕೆಯ ಸಮುದಾಯಕ್ಕೆ ಭರವಸೆ ಮತ್ತು ಹಣಕಾಸು ಬಲ ತಲುಪಿಸುತ್ತಿದ್ದಾರೆ’ ಎಂದು ಬಿಲ್ಗೇಟ್ಸ್ ಅಭಿನಂದಿಸಿದ್ದಾರೆ.
ಬಿಲ್ಗೇಟ್ಸ್ ಅವರ ಈ ಸಾಮಾಜಿಕ ಜಾಲತಾಣದ ಪೋಸ್ಟ್ ಗೆ ಕೇಂದ್ರ ಸಚಿವ ಎ.ವೈಷ್ಣವ್ ಸ್ಪಂದಿಸಿ ಪ್ರತಿಕ್ರಿಯಿಸಿದ್ದು, ಕುಸುಮಾ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇ ಪೋಸ್ಟ್ ನಲ್ಲಿ ಬಿಲ್ಗೇಟ್ಸ್ ಫೌಂಡೇಶನ್ ಜೊತೆ ಕುಸುಮಾ ಮಾತನಾಡಿರುವ ವಿಡಿಯೋವನ್ನೂ ಸೇರಿಸಲಾಗಿದ್ದು, ಹುಸ್ಕೂರಿನಲ್ಲಿ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಆಗಿರುವ ಕುಸುಮಾ, ತಮ್ಮ ಕೆಲಸದ ಅನುಭವದ ಜತೆಗೆ ಗ್ರಾಹಕರೊಂದಿಗಿನ ಸಂವಾದದ ಬಗ್ಗೆ ವಿಡಿಯೊದಲ್ಲಿ ಹಂಚಿಕೊಂಡಿದ್ದಾರೆ.