ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ
ಇನ್ನು ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ
ಬೆಂಗಳೂರು: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ-2024 ಅನ್ನು ಕರ್ನಾಟಕ ವಿಧಾನಸಭೆಯು ಅಂಗೀಕರಿಸಿತು.
ಗುರುವಾರ ವಿಧಾನಸಭೆಯಲ್ಲಿ ವಿಧೇಯಕ ಕುರಿತು ಪ್ರಸ್ತಾಪಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ‘ವಿಧೇಯಕದ 17ನೆ ಪ್ರಕರಣದಲ್ಲಿ (6) ರಾಜ್ಯ ಸರಕಾರದ ಇಲಾಖೆಗಳು, ಉದ್ಯಮಗಳು, ಸ್ವಾಯತ್ತ ಸಂಸ್ಥೆಗಳು, ಸಹಕಾರ ಮತ್ತು ಸಾರ್ವಜನಿಕ ಉದ್ಯಮಗಳು, ಬ್ಯಾಂಕುಗಳು, ಇತರ ಹಣಕಾಸು ಸಂಸ್ಥೆಗಳು, ಖಾಸಗಿ ಕೈಗಾರಿಕೆಗಳು ಮತ್ತು ವಿಶ್ವವಿದ್ಯಾಲಯಗಳ ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬಳಸಬೇಕು.ನಾಮಫಲಕಗಳ ಒಟ್ಟಾರೆ ವಿಸ್ತೀರ್ಣದಲ್ಲಿ ಕನ್ನಡ ಭಾಷೆಯನ್ನು ಮೇಲ್ಭಾಗದಲ್ಲಿ ಶೇ.60 ರಷ್ಟು ಪ್ರದರ್ಶಿಸುವುದು ಕಡ್ಡಾಯ ಮಾಡಲಾಗಿದೆ. ಶೇ.40 ರಷ್ಟು ಇತರ ಭಾಷೆಯನ್ನು ಕೆಳಭಾಗದಲ್ಲಿ ಬಳಸಬಹುದಾಗಿದೆ. ಈ ಹಿಂದೆ ಇದನ್ನು ಶೇ.50:50 ಎಂದು ಆದೇಶ ಹೊರಡಿಸಲಾಗಿತ್ತುʼ ಎಂದು ವಿವರಿಸಿದರು.
ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಈ ತಿದ್ದುಪಡಿ ವಿಧೇಯಕವನ್ನು ನಾನು ಸ್ವಾಗತಿಸುತ್ತೇನೆ. ಆದರೆ, ನನಗೆ ಇರುವ ಆತಂಕವೇನೆಂದರೆ, ಎಂಎನ್‍ಸಿ ಕಂಪೆನಿಗಳು, ದೊಡ್ಡ ದೊಡ್ಡ ಮಾಲ್‍ಗಳು, ಇವನ್ನು ಪಾಲಿಸುತ್ತವೆಯೇ? ದೊಡ್ಡ ಮೊತ್ತದ ದಂಡ ಹಾಕಿದಾಗ ಮಾತ್ರ ಅವು ಹೆದರುತ್ತವೆಯೇ ಹೊರತು. ನೋಟಿಸ್‍ಗಳಿಗೆ ಹೆದರುವುದಿಲ್ಲ. ಆದ್ದರಿಂದ ನಿಯಮ ರೂಪಿಸುವಾಗ ಈ ಆದೇಶವನ್ನು ಪಾಲಿಸದ ಸಂಸ್ಥೆಗಳಿಗೆ ದೊಡ್ಡ ಮೊತ್ತದ ದಂಡವನ್ನು ಹಾಕಬೇಕು. ಸಾಧ್ಯವಾದರೆ ಪೊಲೀಸ್ ಅಧಿಕಾರಿಗಳು ಸಮಿತಿಯಲ್ಲಿರಲಿ ಎಂಬುದನ್ನು ಗಮನದಲ್ಲಿರಿಸಿಕೊಳ್ಳಿ ಎಂದರು. ಬಿಜೆಪಿ ಸದಸ್ಯರಾದ ಆರಗ ಜ್ಞಾನೇಂದ್ರ ಸೇರಿದಂತೆ ಹಲವು ಸದಸ್ಯರು ತಿದ್ದುಪಡಿ ವಿಧೇಯಕ ಮಂಡನೆಯನ್ನು ಸ್ವಾಗತಿಸಿದರು.