ಬಿಟ್ ಕಾಯಿನ್ ಹಗರಣ: ಪಂಜಾಬ್ ಮೂಲದ ಹ್ಯಾಕರ್ ಎಸ್ಐಟಿ ವಶಕ್ಕೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಅ. 5: ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಸಂಚಲನ ಸೃಷ್ಟಿಸಿದ್ದ ‘ಬಿಟ್ ಕಾಯಿನ್ ಹಗರಣ’ಕ್ಕೆ ಸಂಬಂಧಿಸಿದಂತೆ ಪಂಜಾಬ್ ಮೂಲದ ಹ್ಯಾಕರ್ ರಾಜೇಂದ್ರ ಸಿಂಗ್ ಎಂಬುವನ್ನು ವಿಶೇಷ ತನಿಖಾ ದಳದ(ಎಸ್ಐಟಿ) ಅಧಿಕಾರಿಗಳು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.
ಹ್ಯಾಕರ್ ಶ್ರೀಕೃಷ್ಣ ಯಾನೆ ಶ್ರೀಕಿ ಜೊತೆ ಒಡನಾಟ ಹೊಂದಿದ್ದ ರಾಜೇಂದ್ರ ಸಿಂಗ್, ಹಲವು ಸಾಮಾಜಿಕ ಜಾಲತಾಣ ಹಾಗೂ ಬಿಟ್ ಕಾಯಿನ್ ಏಜೆನ್ಸಿಗಳ ಸರ್ವರ್ ಹ್ಯಾಕ್ ಮಾಡಿದ್ದನೆಂಬ ಮಾಹಿತಿ ಇದೆ. ಪಂಜಾಬ್ಗೆ ಹೋಗಿದ್ದ ಎಡಿಜಿಪಿ ಮನೀಶ್ ಖರ್ಬೀಕರ್ ನೇತೃತ್ವದ ಎಸ್ಐಟಿ ಅಧಿಕಾರಿಗಳ ತಂಡ, ಸತತ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ರಾಜೇಂದ್ರ ಸಿಂಗ್ನನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದೆ ಎಂದು ಮೂಲಗಳು ತಿಳಿಸಿವೆ.
ಶ್ರೀಕಿ ಕಡೆಯಿಂದ ಈಗಾಗಲೇ ಹೇಳಿಕೆ ಪಡೆಯಲಾಗಿದೆ. ಆತನ ಮಾಹಿತಿಯ ನಂತರ ಇದೀಗ ರಾಜೇಂದ್ರ ಸಿಂಗ್ನನ್ನು ಪತ್ತೆ ಮಾಡಲಾಗಿದೆ. ಬೆಂಗಳೂರಿನ ಕೆಂಪೇಗೌಡನಗರ ಠಾಣೆಯಲ್ಲಿ 2020ರಲ್ಲಿ ದಾಖಲಾಗಿದ್ದ ಡ್ರಗ್ಸ್ ಪ್ರಕರಣ, ಕಾಟನ್ಪೇಟೆ ಠಾಣೆಯ ಬಿಟ್ ಕಾಯಿನ್ ಪ್ರಕರಣ ಮತ್ತು ಸಿಐಡಿ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿದ್ದ ಇ-ಪ್ರಾಕ್ಯೂರ್ಮೆಂಟ್ ವೆಬ್ಸೈಟ್ ಕನ್ನ ಪ್ರಕರಣಗಳನ್ನು ಒಟ್ಟಾಗಿ ಎಸ್ಐಟಿ ತನಿಖೆ ಕೈಗೊಂಡಿದೆ ಎಂದು ಮೂಲಗಳು ಹೇಳಿವೆ.