ಬಿಟ್ ಕಾಯಿನ್ ಹಗರಣ: ಆರೋಪಿಗಳ ಮನೆ ಮೇಲೆ ಎಸ್ಐಟಿ ದಾಳಿ
ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ
ಬೆಂಗಳೂರು, ಸೆ.12: ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿರುವ ಬಿಟ್ ಕಾಯಿನ್ ಹಗರಣದ ತನಿಖೆಯನ್ನು ವಿಶೇಷ ತನಿಖಾ ದಳ (ಎಸ್ಐಟಿ) ಚುರುಕುಗೊಳಿಸಿದ್ದು, ಪ್ರಕರಣದ ಪ್ರಮುಖ ಮೂವರು ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿರುವ ಬಗ್ಗೆ ವರದಿಯಾಗಿದೆ.
ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದುಕೊಂಡ ಎಸ್ಐಟಿ ಅಧಿಕಾರಿಗಳ ತಂಡ, ಸೆ. 12ರ ಮಂಗಳವಾರ ಪ್ರಮುಖ ಆರೋಪಿಗಳಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ಸುನೀಶ್ ಹೆಗ್ಡೆ ಮತ್ತು ಪ್ರಸಿದ್ದ್ ಮನೆ ಮೇಲೆ ದಾಳಿ ಮಾಡಿದ್ದಾರೆ. ಸಂಜಯ್ ನಗರದಲ್ಲಿರುವ ಸುನೀಶ್ ಹೆಗ್ಡೆ, ಪ್ರಸಿದ್ದ್ ಹಾಗೂ ಜಯನಗರದಲ್ಲಿರುವ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ಮೂವರ ಮನೆಗಳಲ್ಲಿ ನಡೆಸಿದ ಪರಿಶೀಲನೆಯ ಬಗ್ಗೆ ಪ್ರತಿಕ್ರಿಯೆ ನೀಡಲು ಎಸ್ಐಟಿ ಅಧಿಕಾರಿಗಳು ನಿರಾಕರಿಸಿದ್ದಾರೆ.
ಇನ್ನು ಬಿಟ್ ಕಾಯಿನ್ ಹಗರಣದ ತನಿಖೆಯನ್ನು ಪ್ರಾರಂಭದಲ್ಲಿ ಸಿಐಡಿಗೆ ವಹಿಸಲಾಗಿತ್ತು. ಸಿಐಡಿ ಈಗಾಗಲೇ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಚಾರ್ಚ್ ಶೀಟ್ ಸಲ್ಲಿಸಿದೆ. ಈ ನಡುವೆ ಪ್ರಸಕ್ತ ಕಾಂಗ್ರೆಸ್ ಸರಕಾರ ಪ್ರಕರಣದ ಮರು ತನಿಖೆಗೆ ಹಿರಿಯ ಐಪಿಎಸ್ ಅಧಿಕಾರಿ ಮನೀಷ್ ಕರ್ಬಿಕರ್ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಿದೆ.