ಶಾಸಕರ ಖರೀದಿಗೆ ಹಣದ ಆಮಿಷ ಆರೋಪ: ಶಾಸಕ ರವಿಕುಮಾರ್ ಗಣಿಗ ವಿರುದ್ಧ ಬಿಜೆಪಿ ದೂರು
ರವಿಕುಮಾರ್ ಗಣಿಗ
ಮಂಡ್ಯ: ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಬಿಜೆಪಿ ನಾಯಕರು 100 ಕೋಟಿ ರೂ. ಆಮಿಷವೊಡ್ಡುತ್ತಿದ್ದಾರೆ ಎಂಬ ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿಕೆ ವಿರುದ್ಧ ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ನಗರದ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶಾಸಕ ರವಿಕುಮಾರ್ ಗಣಿಗ ಅವರ ಆರೋಪ ಆಧಾರರಹಿತವಾದದ್ದು. ದುರುದ್ದೇಶಪೂರ್ವಕವಾಗಿ ಆರೋಪ ಮಾಡಲಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಬೇಕು ಎಂದು ಮಂಜುನಾಥ್ ದೂರಿನಲ್ಲಿ ಮನವಿ ಮಾಡಿದ್ದಾರೆ.
ಬಿಜೆಪಿ ಕೇಂದ್ರ ನಾಯಕರಾದ ಬಿ.ಎಲ್.ಸಂತೋಷ್, ಕೇಂದ್ರ ಸಚಿವರಾದ ಪಹ್ಲಾದ್ ಜೋಶಿ, . ಶೋಭಾ ಕರಂದ್ಲಾಜೆ ಹಾಗೂ ಎಚ್.ಡಿ.ಕುಮಾರಸ್ವಾಮಿ ತಮ್ಮ ಬ್ರೋಕರ್ಗಳ ಮೂಲಕ ಕಾಂಗ್ರೆಸ್ ಶಾಸಕರಿಗೆ ಹಣದ ಆಮಿಷವೊಡ್ಡಿ ಸರಕಾರ ಪತನಗೊಳಿಸಲು ಆಪರೇಷನ್ ಕಮಲ ನಡೆಸಲು ಯತ್ನಿಸಿದ್ದಾರೆ ಎಂಬ ಶಾಸಕರ ಹೇಳಿಕೆ ಸುಳ್ಳು ಹೇಳಿಕೆಯಾಗಿದೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.
ಶಾಸಕ ರವಿಕುಮಾರ್ ಅವರ ಸುಳ್ಳು ಹೇಳಿಕೆಯಿಂದ ನಮ್ಮ ಪಕ್ಷದ(ಬಿಜೆಪಿ) ವರ್ಚಸ್ಸಿಗೆ ತೀವ್ರ ದಕ್ಕೆಯಾಗುವ ಸಂಭವವಿರುತ್ತದೆ ಹಾಗೂ ಜನಮಾನಸದಲ್ಲಿ ನಮ್ಮ ಪಕ್ಷ ಮತ್ತು ನಾಯಕರುಗಳ ವಿರುದ್ಧ ಕೆಟ್ಟ ಅಭಿಪ್ರಾಯ ಮೂಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಶಾಸಕ ರವಿಕುಮಾರ್ ಗಣಿಗ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.