ಅಶಿಸ್ತಿನ ನಡವಳಿಕೆಗೆ ಕಡಿವಾಣ ಹಾಕಲು ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ : ವಿಜಯೇಂದ್ರ
"ಉಪಚುನಾವಣೆಯ ಸೋಲಿನ ಅಧ್ಯಯನಕ್ಕೆ ಸತ್ಯಶೋಧನಾ ತಂಡ ರಚನೆ"
PC : x/@BYVijayendra
ಬೆಂಗಳೂರು : ಹಲವಾರು ತಿಂಗಳುಗಳಿಂದ ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್ ಸೇರಿದಂತೆ ಕೆಲ ಮುಖಂಡರ ಅಶಿಸ್ತಿನ ನಡವಳಿಕೆಗೆ ಕಡಿವಾಣ ಹಾಕಲು ಹಾಗೂ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲು ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಶನಿವಾರ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ರಾಜ್ಯ ಕೋರ್ ಕಮಿಟಿ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪಕ್ಷದಲ್ಲಿನ ಆಂತರಿಕ ಬೆಳವಣಿಗೆಗಳ ಬಗ್ಗೆ ಕೇಂದ್ರದ ವರಿಷ್ಠರಿಗೆ ಮನವರಿಕೆ ಮಾಡಿ, ಎಲ್ಲವೂ ಸುಸೂತ್ರವಾಗಿ ಸರಿಯಾದ ನಿಟ್ಟಿನಲ್ಲಿ ಹೋಗಬೇಕೆಂದು ಚರ್ಚೆ ಆಗಿದೆ ಎಂದು ತಿಳಿಸಿದರು.
ಬಿಜೆಪಿ ಚಿಹ್ನೆಯಡಿ ಗೆದ್ದ ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಮ ಹೆಬ್ಬಾರ್ ಹಲವಾರು ತಿಂಗಳಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಜೊತೆ ಅಧಿಕೃತವಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಈ ವಿಚಾರವನ್ನು ಹಿಂದೆಯೂ ಚರ್ಚಿಸಲಾಗಿತ್ತು. ಇದೆಲ್ಲದಕ್ಕೂ ಇತಿಶ್ರೀ ಹಾಕಲು ಹಾಗೂ ಬಿಗಿಯಾದ ಕ್ರಮ ಕೈಗೊಳ್ಳಲು ಕೋರ್ ಕಮಿಟಿ ಸರ್ವಾನುಮತದಿಂದ ಕೋರಿದೆ. ರಾಷ್ಟ್ರೀಯಾಧ್ಯಕ್ಷರ ಮತ್ತು ರಾಷ್ಟ್ರೀಯ ನಾಯಕರ ಗಮನಕ್ಕೆ ತಂದು ಇತ್ಯರ್ಥ ಮಾಡಬೇಕೆಂಬ ತೀರ್ಮಾನ ಆಗಿದೆ ಎಂದು ತಿಳಿಸಿದರು.
ಅಧ್ಯಯನ ಸಮಿತಿ: ಕೆಲವು ಪ್ರಮುಖ ವಿಚಾರಗಳ ಕುರಿತು ಸವಿಸ್ತಾರವಾಗಿ ಚರ್ಚೆ ಆಗಿದೆ. ಇತ್ತೀಚೆಗೆ ನಡೆದ ಉಪಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ಸಂಡೂರು ಮತ್ತು ಶಿಗ್ಗಾಂವಿಯಲ್ಲಿ ಪಕ್ಷಕ್ಕೆ ಏಕೆ ಹಿನ್ನಡೆ ಆಯಿತು ಎಂಬ ಬಗ್ಗೆ ತಿಳಿದುಕೊಳ್ಳಲು ಮಾಜಿ ಸಿಎಂ ಸದಾನಂದಗೌಡ, ಉಪಾಧ್ಯಕ್ಷ ಎನ್.ಮಹೇಶ್ ನೇತೃತ್ವದಲ್ಲಿ ಸತ್ಯಶೋಧನಾ ತಂಡವನ್ನು ರಚಿಸಲು ತೀರ್ಮಾನಿಸಲಾಗಿದೆ. ಈ ತಂಡವು ಎರಡೂ ಕ್ಷೇತ್ರಕ್ಕೆ ತೆರಳಿ ಮಾಹಿತಿ ಪಡೆಯಲಿದೆ ಎಂದು ಅವರು ತಿಳಿಸಿದರು.
ಎಸ್.ಟಿ.ಸೋಮಶೇಖರ್, ಶಿವರಾಮ ಹೆಬ್ಬಾರ್ ಅಮಾನತು ಮಾಡುವಂತೆ ಮತ್ತು ಅನರ್ಹತೆಗೆ ಕೋರಬೇಕೆಂದು ಕೋರ್ ಕಮಿಟಿ ಸದಸ್ಯರು ತಿಳಿಸಿದ್ದಾರೆ. ಎಲ್ಲವನ್ನೂ ವರಿಷ್ಠರ ಗಮನಕ್ಕೆ ತಂದು ತಕ್ಷಣ ನಿರ್ಧರಿಸುವ ನಿಟ್ಟಿನಲ್ಲಿ ನಾವು ಕೋರಲು ತೀರ್ಮಾನ ಆಗಿದೆ ಎಂದು ವಿಜಯೇಂದ್ರ ಇದೇ ವೇಳೆ, ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ಕೊಟ್ಟರು.
ಯತ್ನಾಳ್ ಉಚ್ಚಾಟನೆಗೆ ಕೋರಿದ್ದೀರಾ ಎಂದು ಕೇಳಿದಾಗ, ಆ ಬಗ್ಗೆ ನಾನು ಬಹಿರಂಗವಾಗಿ ಮಾತನಾಡಲು ಆಗುವುದಿಲ್ಲ, ಈ ವಿಚಾರ ವರಿಷ್ಠರ ಅಂಗಳದಲ್ಲಿ ಇದೆ. ಯತ್ನಾಳ್ ಅವರು ಶಿಸ್ತು ಸಮಿತಿ ಮುಂದೆ ಹಾಜರಾಗಿ ಬಂದಿದ್ದಾರೆ ಎಂದ ಅವರು, ಇದೆಲ್ಲವೂ ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯದಲ್ಲ, ಕಾರ್ಯಕರ್ತರಿಗೂ ಬೇಸರವಾಗಿದೆ. ಯಾರೇ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಬೇಕು. ಹಾದಿ-ಬೀದಿಯಲ್ಲಿ ಮಾತನಾಡುವವರ ವಿರುದ್ಧ ಗಂಭೀರ ಕ್ರಮ ಕುರಿತು ಚರ್ಚೆ ಆಗಿದೆ ಎಂದರು.
ಕೋರ್ ಕಮಿಟಿ ಸಭೆಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಉಸ್ತುವಾರಿ ರಾಧಾಮೋಹನ್ ದಾಸ್, ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಎಲ್ಲ ಕೋರ್ ಕಮಿಟಿ ಸದಸ್ಯರು ಭಾಗವಹಿಸಿದ್ದರು.