ಸಿದ್ದರಾಮಯ್ಯ, ಡಿಕೆಶಿ ರಾಜೀನಾಮೆಗೆ ಬಿಜೆಪಿ ಆಗ್ರಹ
ಐಟಿ ದಾಳಿ ವೇಳೆ 42 ಕೋಟಿ ರೂ. ಪತ್ತೆ ಪ್ರಕರಣ
ಬೆಂಗಳೂರು, ಅ. 13: ಗುತ್ತಿಗೆದಾರರಿಗೆ ಸರಕಾರ ಬಿಡುಗಡೆ ಮಾಡಿದ 650 ಕೋಟಿ ರೂ.ಹಣದಲ್ಲಿ ಬಂದಿರುವ ಕಮಿಷನ್ ಹಣವೇ 42 ಕೋಟಿ ರೂ., ಅದು ಆದಾಯ ತೆರಿಗೆ (ಐಟಿ)ಇಲಾಖೆ ದಾಳಿಯ ವೇಳೆ ಸಿಕ್ಕಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ.
ಶುಕ್ರವಾರ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಣ, ಅದರ ಹಿಂದಿನ ಉದ್ದೇಶದ ಕುರಿತು ಸಂಪೂರ್ಣ ತನಿಖೆ ಆಗಬೇಕು. ಇದು ಕಾಂಗ್ರೆಸ್ಸಿನ ಹಣವೆನ್ನಲು ಬಿಜೆಪಿಯವರ ಬಳಿ ಏನು ಸಾಕ್ಷ್ಯವಿದೆ. ಡಿ.ಕೆ.ಶಿವಕುಮಾರರನ್ನು ಭೇಟಿ ಮಾಡಿ, ಮಾತುಕತೆ ನಡೆಸಿ ಒಪ್ಪಂದ ಆದ ಬಳಿಕ 650 ಕೋಟಿ ರೂ.ಬಿಡುಗಡೆಯಾಗಿದೆ’ ಎಂದು ತಿಳಿಸಿದರು.
ಇದೊಂದು ಎಟಿಎಂ ಸರಕಾರ, ಲೂಟಿಕೋರ ಸರಕಾರ, ಕಲೆಕ್ಷನ್ ಸರಕಾರ ಎನ್ನಲು ಇದಕ್ಕಿಂತ ಬೇರೇನು ಸಾಕ್ಷಿ ಬೇಕು. ಈ ಸರಕಾರದಡಿ ಹಣ ಇಲ್ಲದೆ ವರ್ಗಾವಣೆ ಆಗುತ್ತಿಲ್ಲ. ಈ ಸರಕಾರ ಕಲೆಕ್ಷನ್ ದಂಧೆಯಲ್ಲಿ ಮುಳುಗಿದೆ. ಇದೊಂದು ಎಟಿಎಂ ಸರಕಾರ. ಮಾಜಿ ಕಾರ್ಪೊರೇಟರ್ ಮನೆಯಲ್ಲೂ ಎಷ್ಟೋ ಹಣ ಸಿಕ್ಕಿದೆ ಎನ್ನುತ್ತಾರೆ. ಇದಕ್ಕಿಂತ ದಾಖಲೆ ಬೇಕೇ? ಎಂದು ಅವರು ಕೇಳಿದರು.