‘ಬಿಜೆಪಿ ಸರಕಾರದ ಶೇ.40 ಕಮಿಷನ್ʻ ಪ್ರಕರಣ : ತನಿಖಾ ಆಯೋಗಕ್ಕೆ ಗುತ್ತಿಗೆದಾರರ ಸಂಘದಿಂದ ದಾಖಲೆ ಸಲ್ಲಿಕೆ
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ
ಬೆಂಗಳೂರು: ‘ವಿವಿಧ ಇಲಾಖೆಗಳ ಕಾಮಗಾರಿಗಳಲ್ಲಿನ ಭ್ರಷ್ಟಾಚಾರದ ಕುರಿತು ದಾಖಲೆ ಸಹಿತ ದೂರು ಸಲ್ಲಿಸಿದ್ದೇವೆ. ನಮ್ಮ ಬಳಿ ಲಭ್ಯವಿರುವ 600ಕ್ಕೂ ಹೆಚ್ಚು ಪುಟಗಳಷ್ಟು ದಾಖಲೆಗಳನ್ನು ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಆಯೋಗಕ್ಕೆ ಹಸ್ತಾಂತರಿಸಿದ್ದೇವೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಸರಕಾರದ ಅವಧಿಯಲ್ಲಿ ವಿವಿಧ ಇಲಾಖೆಗಳ ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್ ಪಡೆಯಲಾಗುತ್ತಿತ್ತು ಎಂದು ಪ್ರಧಾನಿ ಮೋದಿ ಹಾಗೂ ಅಂದಿನ ಮುಖ್ಯಮಂತ್ರಿಗೆ ದೂರು ಸಲ್ಲಿಸಲಾಗಿತ್ತು. ಆದರೆ ಯಾವುದೇ ಕ್ರಮ ತೆಗೆದುಕೊಂಡಿಲ್ಲʻ ಎಂದು ದೂರಿದರು.
ಬಿಜೆಪಿ ಸರಕಾರದಲ್ಲಿ ಶೇ.40ರಷ್ಟು ಕಮಿಷನ್ ಪಡೆದಿದ್ದರ ಬಗ್ಗೆ ತನಿಖೆ ನಡೆಸುವಂತೆ ಈಗ ಕಾಂಗ್ರೆಸ್ ಸರಕಾರವು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಆಯೋಗ ರಚಿಸಿದೆ. ಈಗಿನ ಕಾಂಗ್ರೆಸ್ ಸರಕಾರದಲ್ಲಿಯೂ ಭ್ರಷ್ಟಚಾರ ನಡೆಯುತ್ತಿದೆ. ಹಾಗಾಗಿ ಈಗ ನಡೆಯುತ್ತಿರುವ ಭ್ರಷ್ಟಚಾರದ ಬಗ್ಗೆಯೂ ದೂರು ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
‘ಭ್ರಷ್ಟಾಚಾರದ ಕುರಿತು ಆನ್ಲೈನ್ ಮತ್ತು ಆಪ್ಲೈನ್ ಮೂಲಕ ದೂರುಗಳು ಬಂದಿವೆ. ಆರೋಪಗಳಲ್ಲಿ ಮೇಲ್ನೋಟಕ್ಕೆ ಸತ್ಯಾಂಶವಿದೆಯೇ ಎಂದು ಪರಿಶೀಲಿಸಲಾಗುವುದು. ಆ ಬಳಿಕ ವಿಚಾರಣೆ ಆರಂಭಿಸಲಾಗುತ್ತದೆ. ದೂರು ಸಲ್ಲಿಸಲು ಇಂದು(ಬುಧವಾರ) ಕೊನೆಯ ದಿನವಾಗಿದೆ’
ನ್ಯಾ.ಎಚ್.ಎನ್.ನಾಗಮೋಹನ್ ದಾಸ್, ತನಿಖಾ ಆಯೋಗದ ಮುಖ್ಯಸ್ಥರು