ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಇಲ್ಲ ಎಂದೇ ಬಿಜೆಪಿ ಯದುವೀರ್ ರನ್ನು ಕಣಕ್ಕಿಳಿಸಿದೆ: ಸಿದ್ದರಾಮಯ್ಯ
ಬೆಂಗಳೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಇಲ್ಲ ಎಂದೇ ಬಿಜೆಪಿ ಯದುವೀರ್ ಅವರನ್ನು ಕಣಕ್ಕಿಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸೋಮವಾರ ಇಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚು ಅಭ್ಯರ್ಥಿಗಳು ಇರುವುದರಿಂದ ಸಮಸ್ಯೆ ಆಗಿದೆ. ಒಂದೊಂದು ಕಡೆ ಮೂರು-ನಾಲ್ಕು ಜನ ಇರುವುದು ಸಮಸ್ಯೆಯಾಗಿದೆ. ಬಿಜೆಪಿಯವರು ಮೈಸೂರಿನಲ್ಲಿ ಇರೋ ಅಭ್ಯರ್ಥಿ ಬದಲಾವಣೆ ಮಾಡಿದ್ದಾರೆ. ಆಗ ಬಿಜೆಪಿಯವರಿಗೆ ಅಭ್ಯರ್ಥಿ ಇದ್ದರೇ?. ಯದುವೀರ್ ಈಗ ಕಣಕ್ಕಿಳಿಸಿದ್ದಾರೆ ಎಂದು ಆರೋಪಿಸಿದರು.
ಮೈಸೂರಿನಲ್ಲಿ ಯಾವ ರಾಜ ಸ್ಪರ್ಧೆ. ಅವರು ಬಿಜೆಪಿ ಅಭ್ಯರ್ಥಿ. ನನಗೆ ಮೈಸೂರು ಮಾತ್ರವಲ್ಲ ಇಡೀ ರಾಜ್ಯವೇ ಸ್ವಕ್ಷೇತ್ರ. ನಾನು ಓದಿದ್ದು ಮೈಸೂರಿಲ್ಲಿ ಮಾತ್ರ. ಮೈಸೂರು ಹಳ್ಳಿಯಲ್ಲಿ ಓದಿದ್ದು ಅಷ್ಟೇ. ರಾಜ್ಯದ 28 ಲೋಕಸಭಾ ಕ್ಷೇತ್ರವೂ ನಮ್ಮದೇ ಎಂದು ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
ಸಂಸದ ಡಿ.ವಿ.ಸದಾನಂದಗೌಡರಿಗೆ ಕಾಂಗ್ರೆಸ್ ಸಂಪರ್ಕ ಮಾಡಿದ್ದಾರೆಂಬ ವಿಚಾರ ನನಗೆ ಗೊತ್ತಿಲ್ಲ. ಯಾರನ್ನು ಸಂಪರ್ಕ ಮಾಡಿದ್ದಾರೋ ಅವರನ್ನೇ ಕೇಳಿ. ಸದಾನಂದ ಗೌಡ ನನ್ನ ಹೆಸರು ಹೇಳಿದ್ದರಾ?. ನನ್ನ ಸಂಪರ್ಕದಲ್ಲಂತೂ ಇಲ್ಲ. ಕಾಂಗ್ರೆಸ್ ನಾಯಕರು ಯಾರನ್ನಾದರೂ ಸಂಪರ್ಕ ಮಾಡಿರಬಹುದು. ಆ ಬಗ್ಗೆ ನನಗೆ ಗೊತ್ತಿಲ್ಲ’ ಎಂದು ಸಿದ್ದರಾಮಯ್ಯ ವಿವರಣೆ ನೀಡಿದರು.