ಎಚ್‌ಡಿಕೆಗೆ ನಾಯಕತ್ವ ನೀಡುವ ದಾರಿದ್ರ್ಯ ಬಿಜೆಪಿಗಿಲ್ಲ: ಸುನಿಲ್ ಕುಮಾರ್
ಬೆಂಗಳೂರು: ವಿರೋಧ ಪಕ್ಷದ ನಾಯಕನ ಆಯ್ಕೆ ವಿಳಂಬ ಮತ್ತು ಜೆಡಿಎಸ್ ಜತೆ ಮೈತ್ರಿ ವದಂತಿ ಬಗ್ಗೆ ಮಾಜಿ ಸಚಿವ, ಹಾಲಿ ಶಾಸಕ ಸುನಿಲ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಈ ಸಂಬಂಧ ಗುರುವಾರ ಟ್ವೀಟ್ ಮಾಡಿರುವ ಅವರು, ''ಎಚ್‌ಡಿಕೆಗೆ ನಾಯಕತ್ವ ನೀಡುವ ದಾರಿದ್ರ್ಯ ಬಿಜೆಪಿಗಿಲ್ಲ" ಎಂದು ಹೇಳಿದ್ದಾರೆ.
ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿ, "ಜೆಡಿಎಸ್ ಜತೆ ಮೈತ್ರಿಯ ಅನಿವಾರ್ಯತೆ ಬಿಜೆಪಿಗಿಲ್ಲ, ಲೋಕಸಭೆಯಲ್ಲಿ ಕಳೆದ ಸಲದಷ್ಟೇ ಸೀಟು ಗೆಲ್ಲುತ್ತೇವೆ'' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ವಿಪಕ್ಷ ನಾಯಕನ ರೇಸ್ ನಲ್ಲಿ ಸುನಿಲ್ ಕುಮಾರ್ ಅವರ ಹೆಸರು ಕೂಡ ಕೇಳಿ ಬರುತ್ತಿವೆ.
ಕುಮಾರಸ್ವಾಮಿ ಅವರೇ ವಿರೋಧ ಪಕ್ಷದ ನಾಯಕ ಆಗ್ತಾರೆ ಎಂದಿದ್ದ ಸವದಿ!
'ವಿರೋಧ ಪಕ್ಷದ ನಾಯಕ ಸ್ಥಾನ ಜೆಡಿಎಸ್ ಮನೆ ಬಾಗಿಲಿಗೆ ಬರುತ್ತದೆ. ಆ ಸ್ಥಾನಕ್ಕಾಗಿ ಬಹಳ ಕಚ್ಚಾಡ್ತಾ ಇದ್ದಾರೆ ಆದರೆ ಪ್ರಯೋಜನ ಇಲ್ಲ. ಕುಮಾರಸ್ವಾಮಿ ಅವರು ಮಾತ್ರ ವಿರೋಧ ಪಕ್ಷದಲ್ಲಿ ಕೂತು ಕೆಲಸ ಮಾಡ್ತಾ ಇದ್ದಾರೆ. ಅದಕ್ಕಾಗಿಯೇ ಇನ್ನೂ ಆಯ್ಕೆ ಮಾಡಿಲ್ಲ ಅಂತ ಹೊರಗೆ ಚರ್ಚೆ ನಡೀತಾ ಇದೆ. ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಅವರನ್ನೇ ಅಧಿಕೃತವಾಗಿ ನಿಯೋಜನೆ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿರುವುದಾಗಿ ನನಗೆ ಹಳೆ ಪಕ್ಷ ಬಿಜೆಪಿಯ ಕೆಲವು ಸ್ನೇಹಿತರು ತಿಳಿಸಿದ್ದಾರೆ' ಎಂದು ಇತ್ತೀಚೆಗೆ ಮಾಜಿ ಸಚಿವ ಲಕ್ಷ್ಮಣ ಸವದಿ ಅಚ್ಚರಿಯ ಹೇಳಿಕೆ ನೀಡಿದ್ದರು.
ವಿಪಕ್ಷ ನಾಯಕನ ರೇಸ್ ನಲ್ಲಿ ಯಾರ್ಯಾರು?
ಸುನಿಲ್ ಕುಮಾರ್ ಸೇರಿ ಮಾಜಿ ಸಿಎಂ ಬೊಮ್ಮಾಯಿ, ಬಸನಗೌಡ ಯತ್ನಾಳ್ , ಅಶ್ವತ್ಥ್ ನಾರಾಯಣ್, ಆರ್.ಅಶೋಕ್, ಸುರೇಶ್ ಕುಮಾರ್, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೆಸರುಗಳು ಕೇಳಿ ಬರುತ್ತಿವೆ.