ರೌಡಿಗಳಂತೆ ವರ್ತಿಸುವವರಿಗೆ ವಿಪಕ್ಷ ನಾಯಕನ ಪಟ್ಟ ಕಟ್ಟಲು BJP ವರಿಷ್ಠರು ನಿರ್ಧರಿಸಿದಂತಿದೆ: ದಿನೇಶ್ ಗುಂಡೂರಾವ್
ಬೆಂಗಳೂರು, ಜು.20: "ಸದನದಲ್ಲಿ ಯಾರು ರೌಡಿಗಳಂತೆ ವರ್ತಿಸುತ್ತಾರೋ ಅಂತಹವರಿಗೆ ವಿಪಕ್ಷ ನಾಯಕನ ಪಟ್ಟ ಕಟ್ಟಲು BJP ವರಿಷ್ಠರು ನಿರ್ಧರಿಸಿದಂತಿದೆ. ಹಾಗಾಗಿ BJP ಸದಸ್ಯರು ಸದನದಲ್ಲಿ ಜಿದ್ದಿಗೆ ಬಿದ್ದಂತೆ ರೌಡಿಗಳಂತೆ ಆಡುತ್ತಿದ್ದಾರೆ" ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ವಿಧಾನಸಭೆಯಲ್ಲಿ ಬುಧವಾರ ವಿಧಾನಸಭಾ ಉಪಾಧ್ಯಕ್ಷರ ಮೇಲೆ ವಿಧೇಯಕದ ಪ್ರತಿಗಳನ್ನು ಹರಿದು ಎಸೆದು ಬಿಸಾಕಿದ ವಿಪಕ್ಷ ಬಿಜೆಪಿ ಶಾಸಕರ ಕ್ರಮವನ್ನು ಖಂಡಿಸಿ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, "ಕರ್ನಾಟಕ ವಿಧಾನಸಭೆಯಲ್ಲಿ ನಿನ್ನೆ ಯಾವುದು ಆಗಬಾರದಿತ್ತೋ ಅದು ನಡೆದಿದೆ. ಉಪಸಭಾಧ್ಯಕ್ಷರ ಮೇಲೆ ಮಸೂದೆಯ ಪ್ರತಿಯನ್ನು ಹರಿದು ಎಸೆಯುವುದರ ಮೂಲಕ BJP ಸದಸ್ಯರು ಅಕ್ಷರಶಃ ಗೂಂಡಾಗಳಂತೆ ವರ್ತಿಸಿದ್ದಾರೆ. BJPಯವರು ಸದನದ ಮುಖ್ಯಸ್ಥರ ಮೇಲೆಯೇ ಈ ರೀತಿ ರೌಡಿಸಂ ತೋರಿಸಿರುವುದು ಅಕ್ಷಮ್ಯ. ವಿಧಾನಸಭೆಯ ಇತಿಹಾಸದಲ್ಲೇ ಇದೊಂದು ಕಪ್ಪು ಚುಕ್ಕೆ" ಎಂದು ಹೇಳಿದ್ದಾರೆ.
"ಶ್ರೇಷ್ಠ ಪರಂಪರೆ ಹೊಂದಿರುವ ಕರ್ನಾಟಕ ವಿಧಾನಸಭೆ ತನ್ನ ಘನತೆಯಿಂದ ಇಡೀ ದೇಶಕ್ಕೆ ಮಾದರಿಯಾಗಿತ್ತು. ಆದರೆ BJPಯ ಗೂಂಡಾಪಡೆ ತನ್ನ ರೌಡಿಸಂನಿಂದ ಸದನದ ಪಾವಿತ್ರ್ಯ ಹಾಳು ಮಾಡಿ ನಾವೆಲ್ಲರೂ ತಲೆತಗ್ಗಿಸುವಂತೆ ಮಾಡಿದೆ. BJPಯವರು ತಮ್ಮದು ಶಿಸ್ತಿನ ಪಕ್ಷ ಎನ್ನುತ್ತಾರೆ. ಇದೇನಾ ಆ ಪಕ್ಷದ ಶಿಸ್ತು? ಇದೇನಾ ಆ ಪಕ್ಷದ ಸಂಸ್ಲೃತಿ?" ಎಂದು ಪ್ರಶ್ನಿಸಿದ್ದಾರೆ.
"ಚುನಾವಣೆ ಮುಗಿದು 2 ತಿಂಗಳ ಮೇಲಾದರೂ BJPಯವರ ಯೋಗ್ಯತೆಗೆ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಸದನದಲ್ಲಿ ಯಾರು ರೌಡಿಗಳಂತೆ ವರ್ತಿಸುತ್ತಾರೋ ಅಂತಹವರಿಗೆ ವಿಪಕ್ಷ ನಾಯಕನ ಪಟ್ಟ ಕಟ್ಟಲು BJP ವರಿಷ್ಠರು ನಿರ್ಧರಿಸಿದಂತಿದೆ. ಹಾಗಾಗಿ BJP ಸದಸ್ಯರು ಸದನದಲ್ಲಿ ಜಿದ್ದಿಗೆ ಬಿದ್ದಂತೆ ರೌಡಿಗಳಂತೆ ಆಡುತ್ತಿದ್ದಾರೆ" ಎಂದು ಟೀಕಿಸಿದ್ದಾರೆ.