ಹೊಂದಾಣಿಕೆ ಮಾತುಕತೆಗೆ ಸಿಂಗಾಪುರಕ್ಕೆ ತೆರಳಿದ ಬಿಜೆಪಿ - ಜೆಡಿಎಸ್ ನಾಯಕರು: ಡಿ.ಕೆ.ಶಿವಕುಮಾರ್
ಬೆಂಗಳೂರು, ಜು.24: ‘ಶತ್ರುವಿನ ಶತ್ರು ಮಿತ್ರ’ ಎಂಬ ತಂತ್ರಗಾರಿಕೆ ಮೇಲೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದು, ಅದು ಮುಂದುವರಿಯುತ್ತದೆಯೋ ಇಲ್ಲವೋ ಗೊತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೊಂದಾಣಿಕೆಗೆ ಮುಂದಾಗಿದ್ದು, ಇಲ್ಲಿ ಹಾಗೂ ದಿಲ್ಲಿಯಲ್ಲಿ ಮಾತುಕತೆ ಮಾಡಲಾಗದೆ ಸಿಂಗಾಪುರಕ್ಕೆ ತೆರಳಿದ್ದಾರೆ ಎಂದರು.ಮಾತುಕತೆ
ಸಿಂಗಾಪುರದಲ್ಲಿ ಸರಕಾರ ಬೀಳಿಸುವ ತಂತ್ರ ನಡೆಯುತ್ತಿರುವುದು ವ್ಯಾಪಕ ಚರ್ಚೆಯಾಗುತ್ತಿರುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚರ್ಚೆ ಆಗಬೇಕು. ಹೊರಗೆ ಹೋಗಿ ಚರ್ಚೆ ಮಾಡುವವರು ಹೋಗಲಿ. ಇಲ್ಲಿ ಚರ್ಚೆ ಮಾಡುವವರು ಮಾಡಲಿ. ಎಲ್ಲಿ ಯಾವ ಸಭೆಗಳ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ನಮಗೂ ಗೊತ್ತಿದೆ ಎಂದು ತಿಳಿಸಿದರು.
ಇನ್ನು ತ್ಯಾಜ್ಯ ನಿರ್ವಹಣೆ ವಿಚಾರವಾಗಿ ಮಾತನಾಡಿದ ಅವರು, ‘ನಾನು ಕೆಲವು ಪ್ರದೇಶಗಳಿಗೆ ಭೇಟಿ ನಿಡಿದ್ದು, ಅನಿಲ ಹಾಗೂ ತ್ಯಾಜ್ಯ ಇಂಧನ ಉತ್ಪಾದನೆ ಯೋಜನೆಗಳ ಬಗ್ಗೆ ನಾವು ಗಮನಹರಿಸುತ್ತಿದ್ದೇವೆ. ತ್ಯಾಜ್ಯಗಳನ್ನು ಒಂದು ಕಡೆ ಗುಡ್ಡೆ ಹಾಕಿದರೆ ಯಾವುದೇ ಪ್ರಯೋಜನವಿಲ್ಲ. ತ್ಯಾಜ್ಯಗಳನ್ನು ಸುಟ್ಟು ಹಾಕಬೇಕು. ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕ ನಿಷ್ಕ್ರಿಯವಾಗಿದ್ದು, ಈ ವಿಚಾರವಾಗಿ ಅಧ್ಯಯನ ಮಾಡಲು ಮುಂಬೈ, ದಿಲ್ಲಿ, ಇಂದೋರ್ ಗಳಿಗೆ ಭೇಟಿ ನೀಡಲಾಗುವುದು ಎಂದು ತಿಳಿಸಿದರು.