ಬಿಜೆಪಿ ಮುಖಂಡರು ಪ್ರತಿಯೊಂದು ವಿಚಾರವನ್ನು ರಾಜಕೀಯಗೊಳಿಸುತ್ತಿದ್ದಾರೆ : ಜಿ.ಪರಮೇಶ್ವರ್
ಬೆಂಗಳೂರು: ಬಿಜೆಪಿಯ ಪ್ರಾಮುಖ್ಯತೆ, ಜನಪ್ರೀಯತೆ ತಗ್ಗಿದೆ. ದೇಶದೆಲ್ಲೆಡೆ 400 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ, ಪ್ರತಿಯೊಂದು ವಿಚಾರವನ್ನು ಆ ಪಕ್ಷದ ಮುಖಂಡರು ರಾಜಕೀಯಗೊಳಿಸುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ದೂರಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಇನ್ನಿತರ ಕಾರಣಗಳನ್ನು ದೇಶದ ಜನರು ಅರ್ಥ ಮಾಡಿಕೊಂಡಿದ್ದಾರೆ. ಆದರೆ, ಚುನಾವಣೆಯಲ್ಲಿ ಯಾವತ್ತು ಒಬ್ಬರನ್ನೊಬ್ಬರು ಪರಸ್ಪರ ದ್ವೇಷ ಮಾಡುವಂತಹದ್ದು ನೋಡಿರಲಿಲ್ಲ. ಪ್ರಧಾನಮಂತ್ರಿ ಸೇರಿದಂತೆ ಯಾವುದೇ ಪಕ್ಷದವರು ಧರ್ಮದ ಆಧಾರದ ಮೇಲೆ ಮಾತನಾಡುವುದನ್ನು ನೋಡಿರಲಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ. ಚುನಾವಣೆಯಲ್ಲಿ ಜನರು ಯಾವ ರೀತಿಯ ಪ್ರತಿಕ್ರಿಯೆ ಮಾಡುತ್ತಾರೆ ಎಂಬುದನ್ನು ನೋಡಬೇಕು ಎಂದು ತಿಳಿಸಿದರು.
ಕಾನೂನು ಬಿಟ್ಟು ಕೆಲಸ ಮಾಡಲು ಆಗುವುದಿಲ್ಲ
ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿನಿ ‘ನೇಹಾ’ಗಾಗಿ ಮತ ಹಾಕಿ ಎಂದು ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ. ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿರುವ ಅರ್ಥ ಕಾಣಿಸುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಹೋಗುವುದಿಲ್ಲ. ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುವುದಾಗಿ ಈಗಾಗಲೇ ಹೇಳಿದ್ದೇನೆ. ಕಾನೂನು ಬಿಟ್ಟು ಕೆಲಸ ಮಾಡಲು ಆಗುವುದಿಲ್ಲ ಎಂದು ಅವರು ನುಡಿದರು.