ಸಿಎಂ ನಿವಾಸಕ್ಕೆ ಮುತ್ತಿಗೆ ಯತ್ನ : ಬಿಜೆಪಿ ನಾಯಕರು, ಕಾರ್ಯಕರ್ತರು ಪೊಲೀಸ್ ವಶಕ್ಕೆ

PC : x/@BJP4Karnataka
ಬೆಂಗಳೂರು : ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ನಾಯಕರು, ಮುಖಂಡರು, ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸ ಕಾವೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಮಧ್ಯ ಪ್ರವೇಶಿಸಿದ poಲೀಸರು ನಗರದ ಫ್ರೀಡಂ ಪಾರ್ಕ್ನಲ್ಲಿ ಅವರನ್ನು ವಶಕ್ಕೆ ತೆಗೆದುಕೊಂಡ ಪ್ರಸಂಗ ಗುರುವಾರ ನಡೆಯಿತು.
ಎರಡು ದಿನಗಳಿಂದ ನಗರದ ಫ್ರೀಡಂ ಪಾರ್ಕ್ನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿ ಬಿಜೆಪಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಹಿಳಾ ಮೋರ್ಚಾದ ಪದಾಧಿಕಾರಿಗಳು ಮತ್ತಿತರರು ಅಹೋರಾತ್ರಿ ಧರಣಿ ನಡೆಸುತ್ತಿದ್ದರು.
ಗುರುವಾರ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿ ಫ್ರೀಡಂ ಪಾರ್ಕ್ ಬಳಿ ರಸ್ತೆ ತಡೆ ನಡೆಸುವ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಿದ್ದರು. ಹೀಗಾಗಿ, ನೂರಾರು ಕಾರ್ಯಕರ್ತರೊಂದಿಗೆ ರಸ್ತೆಗಿಳಿದು ಸಿಎಂ ಮನೆ ಕಡೆ ತೆರಳಲು ಮುಂದಾದರು. ಅಷ್ಟರಲ್ಲೇ ಬ್ಯಾರಿಕೇಡ್ ಹಾಕಿದ ಪೊಲೀಸರು, ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ತಡೆದರು. ಬ್ಯಾರಿಕೇಡ್ ಮೇಲೆಯೇ ಹತ್ತಿದ ಕಾರ್ಯಕರ್ತರು ಸರಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದರು.
ನಂತರ ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ, ಆರ್.ಅಶೋಕ್, ಸಿ.ಟಿ.ರವಿ, ಎಸ್.ಆರ್.ವಿಶ್ವನಾಥ್, ಸಿ.ಕೆ.ರಾಮಮೂರ್ತಿ, ಮುನಿರತ್ನ, ಬೈರತಿ ಬಸವರಾಜ್, ಛಲವಾದಿ ನಾರಾಯಣಸ್ವಾಮಿ, ಭಾರತಿ ಶೆಟ್ಟಿ ಸೇರಿದಂತೆ ಮತ್ತಿತರರು ಮುತ್ತಿಗೆ ಹಾಕಲು ಮುಂದಾಗುತ್ತಿದ್ದಂತೆ ಪೊಲೀಸರು ತಕ್ಷಣವೇ ವಶಕ್ಕೆ ಪಡೆದು ಬಸ್ನಲ್ಲಿ ಕರೆದೊಯ್ದರು. ಇದೇ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆಯಲ್ಲಿ ಬೆಂಕಿ ಹಚ್ಚಲು ಯತ್ನಿಸಿದರು. ಅದಕ್ಕೆ ಪೊಲೀಸರು ಅವಕಾಶ ಕೊಡಲಿಲ್ಲ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾ ನಿರತರ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಬ್ಯಾರಿಕೇಡ್ ಅಳವಡಿಸಿ ಪ್ರತಿಭಟನಾ ನಿರತರನ್ನು ಪೊಲೀಸರು ತಡೆಯಲು ಯತ್ನಿಸಿದಾಗ ವಿಪಕ್ಷ ನಾಯಕ ಆರ್.ಅಶೋಕ್ ಬ್ಯಾರಿಕೇಡ್ ಹತ್ತಿ ಪೊಲೀಸರು ಹಾಗೂ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಸರಕಾರದ ತಪ್ಪು ನೀತಿಗಳ ವಿರುದ್ಧ ಹೋರಾಟ ಮಾಡುವುದು ನಮ್ಮ ಕರ್ತವ್ಯ. ಮುಖ್ಯಮಂತ್ರಿಗಳ ಮನೆಯ ಬಳಿ ಹೋದಾಗ ನಮ್ಮನ್ನು ಬಂಧಿಸಬೇಕಿತ್ತು. ಮುಂಚೆಯೇ ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ್ದು ಸರಿಯಲ್ಲ ಎಂದು ಖಂಡಿಸಿದರು.
ನಾನು ಮುಖ್ಯಮಂತ್ರಿ ಆಗಿದ್ದಾಗಲೂ ಮುಖ್ಯಮಂತ್ರಿಗಳ ಮನೆಯ ಹತ್ತಿರ ಬಂದಾಗ ಬಂಧಿಸುತ್ತಿದ್ದೆವು. ಈಗ ಮುಂಜಾಗ್ರತಾ ಕ್ರಮವೆಂದು ಮುಂಚಿತವಾಗಿಯೇ ಬಂಧಿಸಿದ್ದು, ಇದು ಸರಿಯಲ್ಲ. ರಾಜ್ಯದ ಉದ್ದಗಲಕ್ಕೆ ನಮ್ಮ ಹೋರಾಟ ಮುಂದುವರೆಸಲಿದ್ದೇವೆ. ಜನವಿರೋಧಿ ಕಾರ್ಯಕ್ರಮಗಳನ್ನು ಹಿಂದಕ್ಕೆ ಪಡೆಯುವವರೆಗೆ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.