ನಿಮ್ಮ ಹರಕು ಬಾಯಿಯಿಂದಲೇ ಚುನಾವಣೆಯಲ್ಲಿ ಬಿಜೆಪಿಗೆ ಸೋಲು : ಯತ್ನಾಳ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ
ಬೆಂಗಳೂರು: ‘ಬಿಜೆಪಿಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್‍ನ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರಿಂದ ಸುಫಾರಿ ಪಡೆದಿದ್ದಾರೆ. ಹೀಗಾಗಿ ಯಾವುದೇ ಮುಲಾಜಿಲ್ಲದೆ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು’ ಎಂದು ಬಿಎಸ್‍ವೈ ಆಪ್ತ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ಶುಕ್ರವಾರ ಇಲ್ಲಿನ ಸದಾಶಿವನಗರದಲ್ಲಿನ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪರ ಸಭೆ ನಡೆಸಿದ ಎಂ.ಪಿ.ರೇಣುಕಾಚಾರ್ಯ, ಹರತಾಳ ಹಾಲಪ್ಪ, ಬೆಳ್ಳಿ ಪ್ರಕಾಶ್, ಮಸಾಲೆ ಜಯರಾಮ್, ಎಂ.ಡಿ.ಲಕ್ಷ್ಮಿನಾರಾಯಣ್ ಪರಣ್ಣ ಮನವಳ್ಳಿ, ಬಸವರಾಜ್ ದಡೇಸೂರ್, ಸುನೀಲ್ ಹೆಗಡೆ, ಪಿಳ್ಳೆ ಮುನಿಸ್ವಾಮಪ್ಪ ಸಹಿತ ಇನ್ನಿತರರು ಯತ್ನಾಳ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಪಿ.ರೇಣುಕಾಚಾರ್ಯ, ‘ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಮುಗಿಸಲು ಕಾಂಗ್ರೆಸ್ ನಾಯಕರು ಸುಫಾರಿ ನೀಡಿದ್ದಾರೆ. ಹೀಗಾಗಿಯೇ ಯತ್ನಾಳ್ ಎಲ್ಲರ ವಿರುದ್ಧವೂ ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಾಯಿ ಮುಚ್ಚಿಕೊಂಡು ಇರದಿದ್ದರೆ ನಾವು ಬೀದಿಗೆ ಇಳಿಯಬೇಕಾಗುತ್ತದೆ, ಹುಷಾರ್..’ ಎಂದು ಎಚ್ಚರಿಕೆ ನೀಡಿದರು.
‘ನಿಮ್ಮ ಹರಕುಬಾಯಿ ಕಾರಣದಿಂದಲೇ ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷ ಸೋಲು ಕಂಡಿದೆ. ನಿಮ್ಮ ಸರ್ವಾಧಿಕಾರಿ ಧೋರಣೆಯನ್ನು ಇನ್ನೂ ಸಹಿಸಲು ಸಾಧ್ಯವಿಲ್ಲ. ಪಕ್ಷದ ಒಳಿತಿಗೆ ಮಾಜಿ ಸಿಎಂ ಸದಾನಂದಗೌಡ ಸಲಹೆ ನೀಡಿದರೆ, ಅವರ ವಿರುದ್ಧವೇ ಹೇಳಿಕೆ ನೀಡುವಷ್ಟು ದೊಡ್ಡ ನಾಯಕರೇ ನೀವು. ನೀವೊಬ್ಬ ಬ್ಲ್ಯಾಕ್ ಮೇಲರ್. ನಿಮ್ಮದನ್ನು ನಾವು ಬಿಚ್ಚಬೇಕಾಗುತ್ತದೆ ಎಂದು ರೇಣುಕಾಚಾರ್ಯ ಏಕವಚನದಲ್ಲೇ ಆಕ್ರೋಶ ವ್ಯಕ್ತಪಡಿಸಿದರು.
‘ವಿಜಯಪುರ ಕ್ಷೇತ್ರದಲ್ಲಿ ತಾವೊಬ್ಬರು ಗೆದ್ದು, ಜಿಲ್ಲೆಯ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮತ್ತು ಶಿಗ್ಗಾಂವಿ ಉಪಚುನಾವಣೆಯಲ್ಲಿ ಭರತ್ ಸೋಲಲು ಯತ್ನಾಳ್ ಕಾರಣ. ಬಿಜೆಪಿಗೆ ಯತ್ನಾಳ ಕೊಡುಗೆ ಏನು? ಎಂದು ಪ್ರಶ್ನಿಸಿದ ಅವರು, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ಪ್ರಹ್ಲಾದ್ ಜೋಶಿ ವಕ್ಫ್ ಆಸ್ತಿ ಹೋರಾಟಕ್ಕೆ ಬೆಂಬಲ ನೀಡಿದರೆ ಹೊರತು ನಿಮಗೆ ಬೆಂಬಲ ನೀಡಿಲ್ಲ ಎಂದು ನುಡಿದರು.
‘ನಮ್ಮ ತಂದೆ ಸಮಾನರಾದ ಯಡಿಯೂರಪ್ಪನವರು ನಾನು ಸೇರಿದಂತೆ ಇಲ್ಲಿರುವ ನೂರಾರು ಮಂದಿಯನ್ನು ಬೆಳೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರ ಕೈಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ನೀವು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದೀರಿ. ಕೂಡಲೇ ನಿಮ್ಮ ಪ್ರತ್ಯೇಕ ಅಭಿಯಾನ ನಿಲ್ಲಿಸಬೇಕು. ನಾವು ಪಕ್ಷಕ್ಕಾಗಿ ಪ್ರವಾಸ ಕೈಗೊಂಡಿದ್ದೇವೆಯೇ ಹೊರತು, ಪರ್ಯಾಯವಲ್ಲ’ ಎಂದು ಅವರು ವಿವರಣೆ ನೀಡಿದರು.
ಯತ್ನಾಳ್‍ರನ್ನು ಕಡೆಗಣಿಸಿಲ್ಲ: ‘ನಮ್ಮಲ್ಲಿ ಅಧ್ಯಕ್ಷರ ಆದೇಶವೇ ಪಕ್ಷದ ಆದೇಶ. ನಾವು ಯತ್ನಾಳ್‍ರನ್ನು ಕಡೆಗಣಿಸಿಲ್ಲ. ಮುಂದೊಂದು ದಿನ ಹೈಕಮಾಂಡ್ ಯತ್ನಾಳ್‍ರನ್ನೇ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿಬಿಟ್ಟರೆ ಅದನ್ನು ನಾವು ಸ್ವೀಕರಿಸಬೇಕಾಗುತ್ತದೆ. ಪ್ರಸ್ತುತ ಅಧ್ಯಕ್ಷ ಸ್ಥಾನದಲ್ಲಿರುವ ವಿಜಯೇಂದ್ರರ ತೀರ್ಮಾನಗಳೇ ಪಕ್ಷದ ತೀರ್ಮಾನಗಳು. ಅದನ್ನು ಪಕ್ಷದಲ್ಲಿರುವ ಎಲ್ಲರೂ ಪಾಲಿಸಬೇಕು’
-ಛಲವಾದಿ ನಾರಾಯಣಸ್ವಾಮಿ, ವಿಪಕ್ಷ ನಾಯಕ