ಲಂಚಕ್ಕೆ ಬೇಡಿಕೆ, ಜೀವ ಬೆದರಿಕೆ, ಜಾತಿ ನಿಂದನೆ, ಮಹಿಳೆಯರ ಅವಹೇಳನ ಪ್ರಕರಣ: ಬಿಜೆಪಿ ಶಾಸಕ ಮುನಿರತ್ನ ಬಂಧನ
ಬೆಂಗಳೂರು: ಲಂಚಕ್ಕೆ ಬೇಡಿಕೆ, ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದ ಪ್ರಕರಣದಡಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಕೋಲಾರ ಜಿಲ್ಲೆಯ ನಂಗಲಿ ಸಮೀಪ ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ.
ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಎಂಬುವರಿಗೆ ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡುವ ಮೂಲಕ ಗುತ್ತಿಗೆದಾರನ ಪತ್ನಿ, ತಾಯಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ ಆಡಿಯೋ ಬಿಡುಗಡೆಗೊಂಡು ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡು ಕೋಲಾರದಿಂದ ಆಂಧ್ರಪ್ರದೇಶದ ಚಿತ್ತೂರು ಕಡೆಗೆ ತೆರಳುತ್ತಿದ್ದ ಶಾಸಕ ಮುನಿರತ್ನ ಅವರನ್ನು ಮೊಬೈಲ್ ಲೊಕೇಷನ್ ಆಧರಿಸಿ ಪತ್ತೆ ಹಚ್ಚಿದ ಇಲ್ಲಿನ ನಗರದ ವೈಯಾಲಿಕಾವಲ್ ಠಾಣಾ ಪೊಲೀಸರು, ಮುಳಬಾಗಿಲು ಪೊಲೀಸರ ಸಹಾಯದೊಂದಿಗೆ ಬಂಧಿಸಿದ್ದು, ಬೆಂಗಳೂರಿಗೆ ಕರೆತಂದಿದ್ದಾರೆ.
ಏನಿದು ಪ್ರಕರಣ: ಘನತ್ಯಾಜ್ಯ ವಿಲೇವಾರಿಗೆ ಗುತ್ತಿಗೆ ನೀಡುವಂತೆ ಸೆ.9ರಂದು 30ಲಕ್ಷ ರೂ.ಹಣಕ್ಕೆ ಬೇಡಿಕೆ ಇಟ್ಟು, ಜೀವ ಬೆದರಿಕೆ ಹಾಕಿರುವ ಆರೋಪದ ಮೇಲೆ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ, ಸರಕಾರಿ ಅಧಿಕಾರಿ ವಿಜಯ್ಕುಮಾರ್, ಕಾರ್ಯದರ್ಶಿ ಅಭಿಷೇಕ್ ಹಾಗೂ ಶಾಸಕರ ಆಪ್ತ ವಸಂತಕುಮಾರ್ ಎಂಬುವರ ವಿರುದ್ಧ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ನೀಡಿದ ದೂರಿನನ್ವಯ ವೈಯಾಲಿಕಾವಲ್ ಪೋಲೀಸ್ ಠಾಣೆಯಲ್ಲಿ ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ.
ಮತ್ತೊಂದೆಡೆ ಪಾಲಿಕೆ ಸದಸ್ಯ ವೇಲುನಾಯಕ್ ಎಂಬುವರು ನೀಡಿದ ದೂರಿನನ್ವಯ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಶಾಸಕ ಮುನಿರತ್ನ ವಿರುದ್ಧ ಜಾತಿನಿಂದನೆ ಆರೋಪದಡಿ ಪ್ರಕರಣ ದಾಖಲಾಗಿದೆ.
ರೇಣುಕಾಸ್ವಾಮಿ ರೀತಿ ಕೊಲೆ ಬೆದರಿಕೆ:
ಘನತ್ಯಾಜ್ಯ ವಿಲೇವಾರಿಗೆ ಗುತ್ತಿಗೆ ನೀಡಿ, ತನಗೆ 30 ಲಕ್ಷ ರೂ. ಹಣವನ್ನು ನೀಡದಿದ್ದರೆ ನಟ ದರ್ಶನ್ ಪ್ರಕರಣದಲ್ಲಿ ಕೊಲೆಯಾದ ರೇಣುಕಾಸ್ವಾಮಿಯ ರೀತಿಯಲ್ಲೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇಷ್ಟೇ ಅಲ್ಲದೆ, ಅವಾಚ್ಯವಾಗಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಗುತ್ತಿಗೆದಾರ ಚಲುವರಾಜು ಆರೋಪಿಸಿದ್ದಾರೆ.
ಆಡಿಯೋ ಸಾಬೀತಾದರೆ ರಾಜೀನಾಮೆಗೆ ಸಿದ್ಧ:
ಮಾಧ್ಯಮಗಳಲ್ಲಿ ಬಿಡುಗಡೆಗೊಂಡಿರುವ ಆಡಿಯೋ ನನ್ನದಲ್ಲ. ಡಿ.ಕೆ.ಸಹೋದರರು ಹೂಡಿದ ಕುತಂತ್ರ ಇದು. ನನ್ನದು ಯಾವುದೇ ತಪ್ಪಿಲ್ಲ. ಕಾನೂನು ಪ್ರಕಾರ ನಾನು ಕ್ರಮ ಕೈಗೊಳ್ಳುತ್ತೇನೆ. ಆಡಿಯೋ ನನ್ನದು ಎಂದು ಸಾಬೀತಾದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಶಾಸಕ ಮುನಿರತ್ನ ಹೇಳಿದ್ದಾರೆ.