ಬಿಜೆಪಿ ಶಾಸಕ ಮುನಿರತ್ನರಿಂದ ಗುತ್ತಿಗೆದಾರನಿಗೆ ಜೀವ ಬೆದರಿಕೆ : ಆರೋಪ
‘ಹಣತಂದು ಕೊಡು, ಇಲ್ಲ ಅಂದ್ರೆ ನಿನ್ನ ಪತ್ನಿಯನ್ನು ಮಂಚಕ್ಕೆ ಕಳುಹಿಸು’ : ವಿಲಕ್ಷಣ ಬೇಡಿಕೆ
ಮುನಿರತ್ನ
ಬೆಂಗಳೂರು : ‘ಘನತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಸಂಬಂಧ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿಯ ಶಾಸಕ ಮುನಿರತ್ನ ಮತ್ತು ಆಪ್ತ ವಸಂತ್ ಕುಮಾರ್ 36 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅಷ್ಟು ಮೊತ್ತವನ್ನು ಕೊಡಲು ನಿರಾಕರಿಸಿದ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ರೀತಿಯಲ್ಲಿ ಕೊಲೆ ಮಾಡುತ್ತೇವೆಂದು ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜ್ ಆರೋಪಿಸಿದ್ದಾರೆ.
ಶುಕ್ರವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಶಾಸಕ ಮುನಿರತ್ನ ಮಾತನಾಡಿದ ಆಡಿಯೋ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಹಣ ವಸೂಲಿ ಮಾಡಲು ಮುನಿರತ್ನ ತನ್ನ ಮನೆಗೆ ಕರೆಸಿಕೊಂಡು ಜಾತಿ ನಿಂದನೆ ಮಾಡಿ, ಹೆಂಡತಿ ಮತ್ತು ತಾಯಿಯ ಬಗ್ಗೆ ಅಶ್ಲೀಲ ಭಾಷೆಯಲ್ಲಿ ನಿಂದಿಸಿ, ಮನಬಂದಂತೆ ಥಳಿಸಿದ್ದಾರೆ ಎಂದು ದೂರಿದರು.
ಘನತ್ಯಾಜ್ಯ ಸಂಗ್ರಹಣೆ ಕೆಲಸದ ಸಲುವಾಗಿ 2021ರ ಸೆಪ್ಟಂಬರ್ ಮೊದಲ ವಾರದಲ್ಲಿ ಕಸ ಸಾಗಿಸುವ 10 ಆಟೋರಿಕ್ಷಾಗಳನ್ನು ಕೊಡಿಸುತ್ತೇನೆಂದು ನಂಬಿಸಿ 20ಲಕ್ಷ ರೂ.ಕೊಡುವಂತೆ ಬೇಡಿಕೆ ಇಟ್ಟಿದ್ದರು. ಅದರಂತೆ ನಾನು ಸ್ನೇಹಿತರ ಬಳಿ ಸಾಲ ಮಾಡಿ 20ಲಕ್ಷ ರೂ.ಗಳನ್ನು ಮುನಿರತ್ನರ ಗನ್ಮ್ಯಾನ್ಗೆ ನೀಡಿದ್ದೆ. 2 ದಿನಗಳ ನಂತರ ಆಟೋಗಳ ಬಗ್ಗೆ ವಿಚಾರಿಸಲು ಮನೆಗೆ ಹೋದಾಗ, ಹೆಚ್ಚುವರಿಯಾಗಿ 10 ಆಟೋಗಳನ್ನು ನೀಡುವಂತೆ ಬಿಬಿಎಂಪಿ ಆಯುಕ್ತರಿಗೆ ಶಿಫಾರಸ್ಸು ಪತ್ರ ಬರೆದಿರುತ್ತೇನೆಂದು ತಿಳಿಸಿ ಪತ್ರದ ಪ್ರತಿ ನೀಡಿ ವಂಚನೆ ಮಾಡಿದ್ದರು ಎಂದು ಚೆಲುವರಾಜ್ ಮಾಹಿತಿ ನೀಡಿದರು.
2023ರ ಜೂನ್ ತಿಂಗಳಿನಲ್ಲಿ ಸಭೆ ಮಾಡುವ ನೆಪದಲ್ಲಿ ಮುನಿರತ್ನ ಮತ್ತೊಮ್ಮೆ ಮನೆಗೆ ಕರೆಸಿಕೊಂಡು, ‘ಎಲ್ಲೋ ಮಾಮೂಲಿ ಹಣ’ ಎಂದು ಕೇಳಿದ್ದರು. ನಾನು ಕಷ್ಟದಲ್ಲಿದ್ದೇನೆ ಈಗ ಹಣ ತಂದಿರುವುದಿಲ್ಲ ಎಂದು ತಿಳಿಸಿದಾಗ, ಅವಾಚ್ಯ ಶಬ್ದಗಳಿಂದ ಬೈದು, ಅಂದೇ ನನಗೆ ಸೇರಿದ್ದ ಗಂಗಾ ಎಂಟರ್ ಪ್ರೈಸಸ್ಗೆ ನೀಡಿರುವ ಕೆಲಸದ ಗುತ್ತಿಗೆದಾರರನ್ನು ಬದಲಾಯಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆಯಲು ಸೂಚಿಸಿದ್ದರು. ಕೆಲಸ ಕಳೆದುಕೊಂಡರೆ ಸಂಸಾರ ನಡೆಸುವುದು ಹೇಗೆನ್ನುವ ದುಃಖದಿಂದ ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಯೋಚಿಸಿದ್ದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸೆಪ್ಟಂಬರ್ ತಿಂಗಳಿನಲ್ಲಿ ಶಾಸಕನ ಆಪ್ತ ವಸಂತ್ಕುಮಾರ್ ನನ್ನನ್ನು ಭೇಟಿ ಮಾಡಿ, ‘ಲೇಯ್ ಅರ್ಜೆಂಟ್ ಆಗಿ ಮುನಿರತ್ನರನ್ನು ಮಾತನಾಡಿಸಿಕೊಂಡು ಬಾ, ಇಲ್ಲವಾದರೆ ನಿನ್ನ ಗ್ರಹಚಾರ ನೆಟ್ಟಗಿರುವುದಿಲ್ಲ’ ಎಂದು ಬೆದರಿಕೆ ಹಾಕಿದ್ದರು. ಮರುದಿನ ಶಾಸಕರನ್ನು ಭೇಟಿ ಮಾಡಿದಾಗ ಹಣ ಕೊಡದೆ ಇರುವುದಕ್ಕೆ ಥಳಿಸಿ ‘5 ವರ್ಷ ಶಾಸಕನಾಗಿರುತ್ತೇನೆ, ನಾನು ಹೇಳಿದಂಗೆ ನಡೆದುಕೊಂಡು ಹಣ ತಂದುಕೊಟ್ಟರೆ, ನಿನಗೆ ಕೆಲಸ ಮಾಡಲು ಬಿಡುತ್ತೇನೆ, ಇಲ್ಲದಿದ್ದರೆ ನಿನ್ನ ಟೆಂಡರ್ ಕ್ಯಾನ್ಸಲ್ ಮಾಡಿಸುತ್ತೇನೆಂದು’ ಬೆದರಿಕೆ ಹಾಕಿದ್ದರು ಚೆಲುವರಾಜ್ ತಿಳಿಸಿದರು.
ಮುಂದಿನ ದಿನಗಳಲ್ಲಿ ನಾನು ಜೀವಂತವಾಗಿ ಇರುತ್ತಿನೋ ಇಲ್ಲವೋ ಗೊತ್ತಿಲ್ಲ. ನನ್ನ ಜಾತಿ ಬಳಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನನ್ನ ಹೆಂಡತಿ ಫೋಟೋ ತೋರಿಸು ಹೇಗಿದ್ದಾಳೆ, ನಿನ್ನ ಹೆಂಡತಿಯನ್ನು ಮಂಚಕ್ಕೆ ಕಳುಹಿಸು ಎಂದಿದ್ದಾರೆ. ನನ್ನ ತಾಯಿಯ ಬಗ್ಗೆ ಅಸಹ್ಯವಾಗಿ ಮಾತಾಡಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ. ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಅವರ ಗಮನಕ್ಕೂ ತರುತ್ತೇನೆ. ದಾಖಲೆ ಇಲ್ಲದ ಕಾರಣ ಇಲ್ಲಿಯವರೆಗೂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರಲಿಲ್ಲ. ಇದೀಗ ಗೃಹಮಂತ್ರಿ, ನಗರ ಪೊಲೀಸ್ ಆಯುಕ್ತರಿಗೂ ದೂರು ನೀಡುತ್ತೇನೆ. ಶಾಸಕ ಮುನಿರತ್ನ ಮತ್ತು ಆತನ ಸ್ನೇಹಿತರಿಂದ ಜೀವ ಬೆದರಿಕೆ ಇರುವುದರಿಂದ ನನಗೆ ಸೂಕ್ತ ರಕ್ಷಣೆ ನೀಡಬೇಕು. ಮುನಿರತ್ನ ಮತ್ತು ಅವರ ಆಪ್ತ ವಸಂತ್ಕುಮಾರ್ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಚೆಲುವರಾಜ್ ಆಗ್ರಹಿಸಿದರು.
ಮುನಿರತ್ನ ವಿರುದ್ಧ ದೂರು: ‘ಬಿಜೆಪಿ ಶಾಸಕ ಮುನಿರತ್ನ ಆಡಿಯೋದಲ್ಲಿ ಜಾತಿ ನಿಂದನೆ ಮಾಡಿದ್ದು, ಅವರ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಪ್ರಕರಣ ದಾಖಲಿಸಬೇಕು. ಮುನಿರತ್ನ, ಹೊಲೆಯ ಮತ್ತು ಒಕ್ಕಲಿಗ ಸಮುದಾಯವನ್ನು ನಿಂದಿಸಿದ್ದು, ಆ ವರ್ಗಗಳ ಆತ್ಮಗೌರವಕ್ಕೆ ಆಘಾತವನ್ನುಂಟು ಮಾಡಲಾಗಿದೆ. ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ’
-ಚಂದ್ರುಪೆರಿಯಾರ್ ಗೌರವಾಧ್ಯಕ್ಷ, ಬೆಂ.ವಿ.ವಿ.ಸ್ನಾತಕೋತ್ತರ-ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ