ಮೈತ್ರಿ ಅಭ್ಯರ್ಥಿಯ ವಿರುದ್ಧವೇ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅಸಮಾಧಾನ
ಬೆಂಗಳೂರು: ವಿಧಾನ ಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯ ವಿರುದ್ಧವೇ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದು, ‘ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡಿ ಎಂದು ಬಿಜೆಪಿಯ ಯಾವೊಬ್ಬ ನಾಯಕರು ಕೇಳಿಲ್ಲ, ನಮಗೇನೂ ಸ್ವಾಭಿಮಾನ ಇಲ್ವಾ?’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸೋಮಶೇಖರ್, ‘ಈ ಹಿಂದೆ ಅಶ್ವಥ್ ನಾರಾಯಣ ವಿರುದ್ದ ಪ್ರಚಾರ ಮಾಡಿದ್ದರು. ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ದವೇ ಮೈತ್ರಿ ಅಭ್ಯರ್ಥಿ ಎ.ಪಿ.ರಂಗನಾಥ ಪ್ರಚಾರ ಮಾಡಿದ್ದರು. ಇದೀಗ ನಾವು ಅವರ ಪರ ಪ್ರಚಾರ ಮಾತನಾಡಬೇಕೇ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನನಗೆ ಮಾಹಿತಿ ಇಲ್ಲ: ‘ನನ್ನ ಕ್ಷೇತ್ರದಲ್ಲಿ ಎಲ್ಲ ಬಿಜೆಪಿ ನಾಯಕರು ಪ್ರಚಾರ ಮಾಡಿದ್ದಾರೆ. ಆದರೆ ನನಗೆ ಈ ಬಗ್ಗೆ ಮಾಹಿತಿಯೇ ಇಲ್ಲ. 24 ಗಂಟೆ ನಮ್ಮ ವಿರುದ್ದ ಅಪಪ್ರಚಾರ ಮಾಡಿದವರ ಬಗ್ಗೆ ನಾವು ಕ್ಯಾಂಪೇನ್ ಮಾಡಲು ಹೇಗೆ ಸಾಧ್ಯ. ಪಾರ್ಟಿ ಕಟ್ಟಿಕೊಂಡು ಏನಾಗಬೇಕ್ರಿ?. ನಾನಾಗಿಯೇ ಪುಟ್ಟಣ್ಣ ಅವರಿಗೆ ಬನ್ನಿ ಎಂದು ಕರೆಯಲಿಲ್ಲ. ಆದರೆ, ಅವರೇ ಬಂದ್ರು ಪ್ರಚಾರ ಮಾಡಿ ಹೋಗಿದ್ದರು. ಹೀಗಾಗಿ ನಾವು ಪ್ರಚಾರ ಮಾಡಬೇಕಾಗುತ್ತದೆ. ನಮಗೂ ಸ್ವಾಭಿಮಾನ ಇದೆ ಎಂದು ಸೋಮಶೇಖರ್ ಆಕ್ರೋಶ ಹೊರ ಹಾಕಿದರು.