ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಗೆ ಸಿ.ಟಿ. ರವಿ ಗೈರು
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಶನಿವಾರದಂದು ನಡೆದ ವಿಚಾರಗೋಷ್ಠಿಗೆ ಬಿಜೆಪಿ ಎಂಎಲ್ಸಿ ಸಿ.ಟಿ. ರವಿ ಗೈರಾಗಿದ್ದಾರೆ.
ಬೆಳಗ್ಗೆ 11 ಗಂಟೆಗೆ ರಾಜಮಾತೆ ಕೆಂಪನಂಜಮ್ಮಣಿ ಮತ್ತು ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಧಾನ ವೇದಿಕೆಯಲ್ಲಿ ನಡೆದ 'ಸಾಹಿತ್ಯದಲ್ಲಿ ರಾಜಕೀಯ; ರಾಜಕೀಯದಲ್ಲಿ ಸಾಹಿತ್ಯ' ಎಂಬ ವಿಚಾರಗೋಷ್ಠಿಯಲ್ಲಿ 'ಸಾಹಿತ್ಯ ಕೇಂದ್ರಿತವಾದ ಸೈದ್ಧಾಂತಿಕ-ರಾಜಕೀಯ ನಿಲುವು' ವಿಷಯದ ಬಗ್ಗೆ ಸಿ.ಟಿ.ರವಿ ಪ್ರಬಂಧ ಮಂಡಿಸಲು ಅವಕಾಶ ಕಲ್ಪಿಸಲಾಗಿತ್ತು.
ಆದರೆ, ಶನಿವಾರ ಬೆಳಗ್ಗೆ ವೇದಿಕೆ ಬಳಿ ಮಹಿಳಾ ಸಂಘಟನೆಗಳು ಸಿ.ಟಿ.ರವಿಯ ವಿಷಯ ಮಂಡನೆ ವಿರೋಧಿಸಿ ಧಿಕ್ಕಾರ ಕೂಗಿದ್ದರು. ಒಂದು ವೇಳೆ ಸಿ.ಟಿ.ರವಿ ಗೋಷ್ಠಿಗೆ ಹಾಜರಾದರೆ ಮಹಿಳೆಯನ್ನು ನಿಂದಿಸಿದ ಆತನಿಗೆ ಹೆಣ್ಣಿನ ಶಕ್ತಿ ಏನೆಂದು ತೋರಿಸುತ್ತೇವೆ. ಛೀಮಾರಿ ಹಾಕಿ ಹಿಂತಿರುಗಿಸುತ್ತೇವೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದರು. ಕೊನೆಗೂ ಸಿ.ಟಿ.ರವಿ ಗೋಷ್ಠಿಗೆ ಹಾಜರಾಗದೆ ಉಳಿದು ಛೀಮಾರಿಯಿಂದ ಪಾರಾದಂತಾಯಿತು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ನಿಂದನೆ ಆರೋಪ ಎದುರಿಸುತ್ತಿರುವ ಸಿ.ಟಿ.ರವಿಗೆ ಮಂಡ್ಯದ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ಕಲ್ಪಿಸಬಾರದು ಎಂದು ವಿರೋಧಿಸಿ ಮಹಿಳಾ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ವತಿಯಿಂದ ಶನಿವಾರ ಪ್ರತಿಭಟನೆ ನಡೆಯಿತು.