ರಾಜ್ಯ ಭೀಕರ ಬರ ಎದುರಿಸುತ್ತಿರುವಾಗ ಬರ ಪರಿಹಾರ ಕೇಳುವುದಕ್ಕೂ ಬಿಜೆಪಿ ಸಂಸದರಿಗೆ ಧ್ವನಿ ಇಲ್ಲ : ಸಚಿವ ಪ್ರಿಯಾಂಕ್ ಖರ್ಗೆ
"ಕನ್ನಡಿಗರ ಪಾಲಿಗೆ ಬಿಜೆಪಿ ಸಂಸದರು ಯಾವುದೇ ಪ್ರಯೋಜನಕ್ಕೆ ಬಾರದ ನಿರುಪಯೋಗಿ ಜೀವಿಗಳು"
ಬೆಂಗಳೂರು : ರಾಜ್ಯ ಭೀಕರ ಬರ ಎದುರಿಸುತ್ತಿರುವ ಸಂದರ್ಭದಲ್ಲಿಯೂ ಬರ ಪರಿಹಾರ ಕೇಳುವುದಕ್ಕೆ ಬಿಜೆಪಿ ಸಂಸದರಿಗೆ ಧ್ವನಿ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, "ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ, ಸುಟ್ಟರೇ ನೊಸಲಿಗೆ ವಿಭೂತಿಯಾದೆ, ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ, ಆದರೆ ನೀವಾರಿಗಾದಿರೋ ಬಿಜೆಪಿ ಸಂಸದರೇ?" ಎಂದು ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಸಂಸದರನ್ನು ಕಟುವಾಗಿ ಟೀಕಿಸಿದ್ದಾರೆ.
"ನೆರೆ ಬಂದಾಗ ಯಡಿಯೂರಪ್ಪನವರು ವೇದಿಕೆ ಮೇಲೆಯೇ ನೆರೆ ಪರಿಹಾರಕ್ಕೆ ಪ್ರಧಾನಿಗೆ ಆಗ್ರಹಿಸಿದ್ದಾಗಲೂ ಬಿಜೆಪಿ ಸಂಸದರು ಕರ್ನಾಟಕದ ಪರ ಬಾಯಿ ಬಿಡಲಿಲ್ಲ. GST ಪರಿಹಾರ, ವಿಶೇಷ ಅನುದಾನದಲ್ಲಿನ ಅನ್ಯಾಯದ ಕುರಿತು ಬೊಮ್ಮಾಯಿಯವರು ಮಾತಾಡಿದಾಗಲೂ ಬಿಜೆಪಿ ಸಂಸದರು ಬಾಯಿ ಬಿಡಲಿಲ್ಲ. ಕೇಂದ್ರ ಬಜೆಟ್ನಲ್ಲಿ ಕರ್ನಾಟಕವನ್ನು ಕಡೆಗಣಿಸಿದಾಗಲೂ ಬಿಜೆಪಿ ಸಂಸದರು ತುಟಿ ಬಿಚ್ಚಲಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಕೋವಿಡ್ ಸಮಯದಲ್ಲಿ ಆಕ್ಸಿಜನ್, ರೆಮಿಡಿಸಿವಿರ್, ವ್ಯಾಕ್ಸಿನ್ ಹಂಚಿಕೆಯಲ್ಲಿ ರಾಜ್ಯವನ್ನು ಕಡೆಗಣಿಸಿದಾಗಲೂ ಬಿಜೆಪಿ ಸಂಸದರು ಮಾತಾಡಲಿಲ್ಲ. ಯಾವುದೇ ವಿಷಯದಲ್ಲೂ ಕರ್ನಾಟಕದ ಪರವಾಗಿ ಸಂಸದರ ನಿಯೋಗ ಕೇಂದ್ರ ಸರ್ಕಾರವನ್ನು ಭೇಟಿಯಾದ ಉದಾಹರಣೆಯೇ ಇಲ್ಲ ಎಂದು ತಿಳಿಸಿದರು.
ಜಗತ್ತಿನಲ್ಲಿ ಪ್ರತಿ ವಸ್ತುವೂ ಒಂದಿಲ್ಲೊಂದು ಉಪಯೋಗಕ್ಕೆ ಬರುತ್ತವೆ, ಆದರೆ ಯಾವುದೇ ಪ್ರಯೋಜನಕ್ಕೆ ಬಾರದ ಬಿಜೆಪಿ ಸಂಸದರು ಕನ್ನಡಿಗರ ಪಾಲಿಗೆ ಇದ್ದೂ ಇಲ್ಲದಂತಿರುವ ನಿರುಪಯೋಗಿ ಜೀವಿಗಳು ಎಂದು ವಾಗ್ದಾಳಿ ನಡೆಸಿದ್ದಾರೆ.