‘ಬಾಡಿಗೆ ಭಾಷಣಕಾರರನ್ನು’ ತಯಾರು ಮಾಡಿ ಬಿಡುವುದೇ ಬಿಜೆಪಿ: ಕಾಂಗ್ರೆಸ್ ವಾಗ್ದಾಳಿ
ಬೆಂಗಳೂರು, ಸೆ. 21: ‘ಚಕ್ರವರ್ತಿ ಸೂಲಿಬೆಲೆ ಎಂಬ ಕರ್ನಾಟಕದ ಫ್ರಿಂಜ್ ಎಲಿಮೆಂಟ್‍ಗೆ ಆತನೇ ಒಪ್ಪಿಕೊಂಡಂತೆ ಟಿಕೆಟ್ ವಂಚನೆ ಮೊದಲೇ ಗೊತ್ತಿತ್ತಂತೆ, ಸಿ.ಟಿ.ರವಿ ಅವರಿಗೂ ತಿಳಿದಿತ್ತಂತೆ. ಬಿಜೆಪಿ ಪಕ್ಷದ ಹೆಸರಲ್ಲಿ ಮಹಾವಂಚನೆ ನಡೆದಿದ್ದರೂ, ಹಣದ ಅಕ್ರಮ ವರ್ಗಾವಣೆ ನಡೆದಿದ್ದರೂ ಈ ಮಹಾ ಸುಭಗಧ್ವಯರು ಸುಮ್ಮನಿದಿದ್ದೇಕೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಗುರುವಾರ ಎಕ್ಸ್ ನಲ್ಲಿ ಸರಣಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ‘ಈ ಚೈನ್ ಚೈತ್ರ ನಮಗೆ ತಿಳಿದೇ ಇಲ್ಲ ಎನ್ನುತ್ತಿರುವ ಬಿಜೆಪಿಗರು ಹಿಂದುತ್ವದ ಹೆಸರಲ್ಲಿ ಯಾರನ್ನು ಬೇಕಾದರೂ ಬಳಸಿಕೊಂಡು ಬೀದಿಗೆ ತಳ್ಳುತ್ತಾರೆ. ರಾಜ್ಯ ಬಿಜೆಪಿ ನಾಯಕರನ್ನೇ ಭೇಟಿ ಮಾಡಲೊಪ್ಪದ ಬಿಜೆಪಿಯ ಹೈಕಮಾಂಡ್ ನಾಯಕರು ಜೆಡಿಎಸ್ ನಾಯಕರನ್ನು ನಿರಾಯಾಸವಾಗಿ ಭೇಟಿಯಾಗುತ್ತಾರೆ. ‘ಎ’ ಟೀಮ್‍ಗಿಂತ ‘ಬಿ’ ಟೀಮ್ ಮೇಲೆಯೇ ಪ್ರೀತಿ ಜಾಸ್ತಿಯೇ? ಎಂದು ಆಕ್ರೋಶ ವ್ಯಕ್ತಪಡಿಸಿದೆ.
ʼಎಚ್‍ಡಿಕೆ ಜತೆ ಹೋಗಿದ್ದರೆ ವರಿಷ್ಠರನ್ನು ಭೇಟಿಯಾಗಬಹುದಿತ್ತುʼ: ‘ರಾಜ್ಯ ಬಿಜೆಪಿ ನಾಯಕರು ಕುಮಾರಸ್ವಾಮಿಯವರ ಜೊತೆಗೆ ಹೋಗಿದ್ದಿದ್ದರೆ ಹೈಕಮಾಂಡ್ ನಾಯಕರ ಭೇಟಿ ಸುಲಭವಾಗುತ್ತಿತ್ತು, ವಿರೋಧ ಪಕ್ಷದ ನಾಯಕನ ಆಯ್ಕೆಯನ್ನು ಚರ್ಚಿಸಬಹುದಿತ್ತು. ಚೈನ್ ಚೈತ್ರಾ ಯಾರೆಂದು ನಮಗೆ ತಿಳಿದೇ ಇಲ್ಲ ಎಂದು ಜಾರಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ ನಾಯಕರು ಹಿಂದೆ ತಮ್ಮ ಸರಕಾರದಲ್ಲಿ ಆಕೆಯ ಮೇಲಿದ್ದ ದ್ವೇಷ ಭಾಷಣದ ಮೂಲಕ ಪ್ರಚೋದನೆ ಮಾಡಿರುವುದರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹಿಂಪಡೆಯಲು ಮುತುವರ್ಜಿ ವಹಿಸಿದ್ದೇಕೆ?’ ಎಂದು ಕಿಡಿಕಾರಿದೆ.
‘ಬಾಡಿಗೆ ಭಾಷಣಕಾರರನ್ನು ತಯಾರು ಮಾಡಿ ಮುಂದೆ ಬಿಡುವುದೇ ಬಿಜೆಪಿ. ಅವರನ್ನು ಬಂಧಿಸಿದರೆ ವಕಾಲತ್ತು ವಹಿಸುವುದೂ ಬಿಜೆಪಿ. ಆದರೆ ಅಕ್ರಮಗಳು, ಹಗರಣಗಳು ನಡೆದಾಗ ಮಾತ್ರ ಸೋಕಾಲ್ಡ್ ಹಿಂದೂ ಕಾರ್ಯಕರ್ತರು ಬಿಜೆಪಿ ಗೆ ‘ಅಪರಿಚಿತರು’ ಆಗುವುದೇಕೆ?’ ಎಂದು ಕಾಂಗ್ರೆಸ್ ಇದೇ ವೇಳೆ ವಾಗ್ದಾಳಿ ನಡೆಸಿದೆ...
‘ಯುವಜನರನ್ನು ದುಶ್ಚಟಗಳ ವ್ಯಸನಿಗಳಾಗುವುದನ್ನು ತಪ್ಪಿಸಲು ಸರಕಾರ ಬದ್ಧ. 18ವರ್ಷದೊಳಗಿನವರಿಗೆ ತಂಬಾಕು ಮಾರಾಟ ಮಾಡುವಂತಿಲ್ಲ ಎಂಬ ನಿಬರ್ಂಧವನ್ನು 21ವರ್ಷಕ್ಕೆ ಹೆಚ್ಚಿಸಿ ಯುವಕರನ್ನು ದುಶ್ಚಟಗಳಿಂದ ದೂರ ಇಡುವ ಪ್ರಯತ್ನ ಮಾಡಲಿದೆ ನಮ್ಮ ಸರಕಾರ. ಹುಕ್ಕಾ ಬಾರ್ ಗಳನ್ನು ನಿಷೇಧಿಸಲು ಕಾಯ್ದೆ ರೂಪಿಸಲು ನಿರ್ಧಾರ ಮಾಡಲಾಗಿದೆ. ಯುವ ಜನತೆಯೇ ದೇಶದ ಆಸ್ತಿ, ಅವರಿಗೆ ವಿದ್ಯೆ, ಉದ್ಯೋಗ, ಭವಿಷ್ಯದ ಕನಸುಗಳನ್ನು ನೀಡಬೇಕೇ ಹೊರತು ದುಶ್ಚಟಗಳನ್ನಲ್ಲ’ ಎಂದು ಕಾಂಗ್ರೆಸ್ ತಿಳಿಸಿದೆ.