ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ: ಹೈಕಮಾಂಡ್ ಗೆ ಸೋಮಣ್ಣ ಮನವಿ
ಬೆಂಗಳೂರು, ಜೂ.23: ನನಗೂ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಒಂದು ಅವಕಾಶ ಮಾಡಿಕೊಡಿ ಎಂದು ಮಾಜಿ ಸಚಿವ ವಿ.ಸೋಮಣ್ಣ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ 45 ವರ್ಷ ರಾಜಕಾರಣ ಅನುಭವ ಇದೆ. ಅದರ ಆಧಾರದ ಮೇಲೆ ನನ್ನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಎಂದು ಕೇಳಿದ್ದೇನೆ ಎಂದು ತಿಳಿಸಿದರು.
ಎರಡು ಬಾರಿ ನಾನು ದೆಹಲಿಗೆ ಹೋಗಿ ಬಂದಿದ್ದೇನೆ. ವರಿಷ್ಠರ ಭೇಟಿ ಮಾಡಿ ಕೆಲ ಸಂಗತಿಗಳ ಬಗ್ಗೆ ಹೇಳಿ ಬಂದಿದ್ದೇನೆ. ಪತ್ರವನ್ನು ಕೂಡ ನಾನು ಬರೆದಿದ್ದೇನೆ. ಪಕ್ಷ ಕೊಟ್ಟ ಎಲ್ಲ ಟಾಸ್ಕ್ಗಳನ್ನು ಸ್ವೀಕಾರ ಮಾಡಿ ಅತ್ಯಂತ ಶ್ರಮಪಟ್ಟು ಎಲ್ಲವನ್ನೂ ನಿರ್ವಹಣೆ ಮಾಡಿದ್ದೇನೆ ಎಂದು ಸೋಮಣ್ಣ ಹೇಳಿದರು.
ನಾನೇನು ಹೇಡಿ ಅಲ್ಲ. ನಾನು ಯಾವುದೇ ಹುದ್ದೆ ತೆಗೆದುಕೊಳ್ಳುವುದಾದರೂ ಅದನ್ನು ಚಾಲೆಂಜ್ ಆಗಿ ತೆಗೆದುಕೊಳ್ಳುತ್ತೇನೆ. ಚುನಾವಣೆಗೆ ಮುನ್ನವೇ ರಾಜ್ಯಾಧ್ಯಕ್ಷ ಸ್ಥಾನ ಕೇಳಿದ್ದೆ. ನಾನು ಚುನಾವಣೆಯಲ್ಲಿ ಸಾಕಷ್ಟು ರಿಸ್ಕ್ ತಗೊಂಡಿದ್ದೇನೆ. ಇವರೆಲ್ಲರಿಗಿಂತ ನಾನು ಚೆನ್ನಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಸಿದ್ದರಾಮಯ್ಯ ವಿರುದ್ಧ ಚುನಾವಣೆಯಲ್ಲಿ ನಿಲ್ಲೋಕೆ ನನಗೇನು ಹುಚ್ಚು ಹಿಡಿದಿತ್ತಾ? ನಾನು ರಾಜ್ಯಾಧ್ಯಕ್ಷ ಆಗುತ್ತೇನೆ ಎಂದರೆ, ಯಡಿಯೂರಪ್ಪನವರು ಒಪ್ಕೋಬೇಕು. ಬೇರೆಯವರೂ ಒಪ್ಪಬೇಕು. ನಾವೆಲ್ಲಾ ಇಷ್ಟು ದಿನ ಯಡಿಯೂರಪ್ಪ ಹೇಳಿದ್ದನ್ನು ಕೇಳಿಲ್ವಾ? ಎಂದು ಸೋಮಣ್ಣ ಪರೋಕ್ಷವಾಗಿ ಕಿಡಿಕಾರಿದರು.
ಕೇವಲ 100 ದಿನಗಳು ರಾಜ್ಯಾಧ್ಯಕ್ಷ ಮಾಡಿ ಸಾಕು ಸಾವಾಲು ತೆಗೆದುಕೊಂಡು ತೋರಿಸುತ್ತೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಬಿಜೆಪಿ ಹೈಕಮಾಂಡ್‌ಗೆ ಮನವಿ ಮಾಡಿದರು.