ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹಗರಣಗಳನ್ನು ನಾವು ಸದ್ಯದಲ್ಲೆ ಬಹಿರಂಗಪಡಿಸುತ್ತೇವೆ: ಡಿ.ಕೆ. ಶಿವಕುಮಾರ್
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಓರ್ವ ಅಪ್ರಬುದ್ಧ ರಾಜಕಾರಣಿ. ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣಕ್ಕೂ ಸಂಬಂಧವಿಲ್ಲ. ಹಾಗೆ ನೋಡಿದರೆ ಈ ಹಗರಣದಲ್ಲಿ ಬ್ಯಾಂಕ್ ಅಧಿಕಾರಿಗಳು ಭಾಗಿಯಾಗಿರುವುದರಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ರಾಹುಲ್ ಗಾಂಧಿ ಪದೇ ಪದೆ ಪರಿಶಿಷ್ಟರ ಬಗ್ಗೆ ಮಾತನಾಡುತ್ತಾರೆ ಹಾಗಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಹಾಗೂ ಮುಡಾ ಹಗರಣದ ಬಗ್ಗೆಯೂ ಮಾತನಾಡಬೇಕು ಎಂದು ವಿಜಯೇಂದ್ರ ನೀಡಿರುವ ಹೇಳಿಕೆಗೆ ಅವರು ಈ ಮೇಲಿನಂತೆ ತಿರುಗೇಟು ನೀಡಿದರು.
ವಿಜಯೇಂದ್ರ ಅವರ ಹಗರಣಗಳನ್ನು ನಾವು ಸದ್ಯದಲ್ಲೆ ಬಹಿರಂಗಪಡಿಸುತ್ತೇವೆ. ಅವರ ಹಗರಣಗಳ ಬಗ್ಗೆ ಬಿಜೆಪಿ ಪಕ್ಷಕ್ಕೂ ಗೊತ್ತಿದೆ. ಅಂತರ್ ರಾಷ್ಟ್ರೀಯ ಮಟ್ಟದಿಂದ ಹಣ ವರ್ಗಾವಣೆಯಾಗಿರುವುದು ಸೇರಿದಂತೆ ಅನೇಕ ವಿಚಾರಗಳಿವೆ. ಅವರ ತಂದೆ ಮುಖ್ಯಮಂತ್ರಿಯಾಗಿದ್ದಾಗ ಏನೆಲ್ಲಾ ಮಾಡಿದ್ದಾರೆ ಎಂದು ಗೊತ್ತಿದೆ. ಅವರ ತಂದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಯಾಕೆ? ವಿಜಯೇಂದ್ರ ಅವರು ಪ್ರಮಾಣಿಕರಾಗಿಲ್ಲ. ಹೀಗಾಗಿ ಅವರು ಈ ವಿಚಾರದಲ್ಲಿ ಮಾತನಾಡುವ ನೈತಿಕತೆ ಹೊಂದಿಲ್ಲ ಎಂದು ಶಿವಕುಮಾರ್ ಹೇಳಿದರು.
ಮುಡಾ ಹಗರಣದಲ್ಲಿ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂಬ ವಿಜಯೇಂದ್ರ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಮುಡಾ ಹಗರಣಗಳನ್ನು ಮಾಡಿರುವುದು ಬಿಜೆಪಿ. ನಮ್ಮ ಮುಖ್ಯಮಂತ್ರಿ ಹಾಗೂ ಅವರ ಕುಟುಂಬದವರಿಗೂ ಈ ಅಕ್ರಮಕ್ಕೂ ಸಂಬಂಧವಿಲ್ಲ. ಮುಡಾದವರು ಇವರ ಜಮೀನನ್ನು ಒತ್ತುವರಿ ಮಾಡಿಕೊಂಡ ಪರಿಣಾಮ ಮುಖ್ಯಮಂತ್ರಿಯ ಕುಟುಂಬದವರು ಮುಡಾ ಸಂಸ್ಥೆಯಿಂದ ಪರಿಹಾರ ಪಡೆಯಲು ಅರ್ಹರಾಗಿದ್ದು, ಅವರು ಪರಿಹಾರ ಪಡೆದಿದ್ದಾರೆ ಎಂದು ತಿಳಿಸಿದರು.
ಕಾನೂನು ಪ್ರಕಾರವಾಗಿ ಅವರು ಪರಿಹಾರ ಪಡೆದಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬದಲಿ ನಿವೇಶನ ಕೇಳಿದ್ದಾರೆ. ಅದೇ ರೀತಿ ಅನೇಕರು ನಿವೇಶನ ಪಡೆದಿದ್ದಾರೆ. ಮುಡಾದಲ್ಲಿ ಅಕ್ರಮ ನಡೆದಿದ್ದರೆ ಅದು ಬಿಜೆಪಿ ಆಡಳಿತ ಅವಧಿಯಲ್ಲಿ ನಡೆದಿದೆ. ಬಸವರಾಜ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಸಿಎಂ ಆಗಿದ್ದಾಗ ಅಕ್ರಮ ನಡೆದಿದೆ. ಈ ಕಾರಣಕ್ಕೆ ನಮ್ಮ ಮುಖ್ಯಮಂತ್ರಿ 2006ರಿಂದ ಮುಡಾ ಅಕ್ರಮ ತನಿಖೆ ನಡೆಸಲು ತೀರ್ಮಾನಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.