ಶೀಘ್ರದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ಶಿವರಾಜ್ ಸಿಂಗ್ ಚೌಹಾಣ್
ವರಿಷ್ಠರು ನನ್ನನ್ನೆ ಮುಂದುವರೆಸುವ ವಿಶ್ವಾಸವಿದೆ ಎಂದ ವಿಜಯೇಂದ್ರ

ಶಿವರಾಜ್ ಸಿಂಗ್ ಚೌಹಾಣ್ (Photo: X/@ChouhanShivraj)
ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಶೀಘ್ರದಲ್ಲೆ ಚುನಾವಣೆ ನಡೆಯಲಿದೆ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಶಿವರಾಜ್ ಸಿಂಗ್ ಚೌವಾಣ್ ಹೇಳಿಕೆ ನೀಡಿರುವುದು, ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರೋಧಿ ಪಾಳಯದಲ್ಲಿ ಹುರುಪು ಮೂಡಿಸುವಂತೆ ಮಾಡಿದೆ.
ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕ ಆದಾಗಿನಿಂದಲೂ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಗುಂಪು ವರಿಷ್ಠರ ನಿರ್ಧಾರವನ್ನು ಬಹಿರಂಗವಾಗಿಯೇ ವಿರೋಧಿಸಿಕೊಂಡು ಬರುತ್ತಿದೆ.
ಮತ್ತೊಂದೆಡೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮುಂದುವರೆಯಲು ವಿಜಯೇಂದ್ರ ಎಲ್ಲ ಪ್ರಯತ್ನಗಳನ್ನು ನಡೆಸುತ್ತಿದ್ದು, ಬೆಂಗಳೂರಿನ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಿವರಾಜ್ ಸಿಂಗ್ ಚೌವಾಣ್ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ತಾನು ಅಧ್ಯಕ್ಷನಾದ ಬಳಿಕ ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳು, ವಿರೋಧಿಗಳ ಅಸಹಕಾರದ ಕುರಿತು ಪ್ರಸ್ತಾವ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ವಿಜಯೇಂದ್ರ ಅವರನ್ನು ಬದಲಿಸಿ ಹೊಸಬರನ್ನು ಅಧ್ಯಕ್ಷ ಸ್ಥಾನಕ್ಕೆ ತರಲು ಬಿಜೆಪಿಯಲ್ಲಿನ ವಿಜಯೇಂದ್ರ ವಿರೋಧಿ ಬಣ ಹೈಕಮಾಂಡ್ ಮಟ್ಟದಲ್ಲಿ ತನ್ನ ಪ್ರಯತ್ನ ನಡೆಸುತ್ತಿರುವಾಗಲೇ, ಶಿವರಾಜ್ ಸಿಂಗ್ ಚೌವಾಣ್ ಹೊಸ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯುವುದಾಗಿ ಹೇಳಿಕೆ ನೀಡಿರುವುದು ಮಹತ್ವದ್ದಾಗಿದೆ.
ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ಕೇಂದ್ರ ಸರಕಾರದ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲು ಬೆಂಗಳೂರಿಗೆ ಆಗಮಿಸಿರುವ ಶಿವರಾಜ್ ಸಿಂಗ್ ಚೌವಾಣ್, ಕುಮಾರಕೃಪಾ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೂತ್ ಕಮಿಟಿಯ ಅಧ್ಯಕ್ಷ ಸ್ಥಾನದಿಂದ ರಾಜ್ಯಾಧ್ಯಕ್ಷ ಸ್ಥಾನದವರೆಗೂ ಚುನಾವಣೆ ನಡೆಯಲಿದೆ. ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.
ಎಲ್ಲರೂ ಸೇರಿಕೊಂಡು ಚರ್ಚೆ ನಡೆಸಿ ಪಕ್ಷದ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ. ಕೆಲವೊಮ್ಮೆ ಅಧ್ಯಕ್ಷರು ಅವಿರೋಧವಾಗಿಯೂ ಆಯ್ಕೆಯಾಗುತ್ತಾರೆ. ರಾಜ್ಯ ಬಿಜೆಪಿ ನಾಯಕರಲ್ಲಿ ಯಾವ ಭಿನ್ನಾಭಿಪ್ರಾಯಗಳೂ ಇಲ್ಲ. ಕರ್ನಾಟಕ ಕಾಂಗ್ರೆಸ್ ಸರಕಾರವನ್ನು ವಿರೋಧ ಪಕ್ಷವಾಗಿರುವ ಬಿಜೆಪಿ ಸಮರ್ಥವಾಗಿ ಎದುರಿಸುತ್ತಿದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವಾಗ ವಿಜಯೇಂದ್ರ ವಿರುದ್ಧ ತಮ್ಮ ಬಣದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಬಸನಗೌಡ ಪಾಟೀಲ್ ಯತ್ನಾಳ್ ಘೋಷಿಸಿರುವುದು, ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಎಡೆ ಮಾಡಿಕೊಡುವಂತಾಗಿದೆ.
ವರಿಷ್ಠರು ನನ್ನನ್ನೆ ಮುಂದುವರೆಸುವ ವಿಶ್ವಾಸವಿದೆ: ವಿಜಯೇಂದ್ರ
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಲ್ಲಿ ವರಿಷ್ಠರು ನನ್ನನ್ನೆ ಮುಂದುವರೆಸುವ ವಿಶ್ವಾಸವಿದೆ. ಪಕ್ಷದ ಹಿರಿಯರು, ವರಿಷ್ಠರು ಸೇರಿಯೇ ನನ್ನನ್ನು ರಾಜ್ಯಾಧ್ಯಕ್ಷನಾಗಿ ಮಾಡಿದರು. ಅಂದಿನಿಂದಲೂ ನಾನು ಸರಕಾರದ ವಿರುದ್ಧ ಸತತ ಹೋರಾಟ ಮಾಡುತ್ತಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನನ್ನ ನೇತೃತ್ವದಲ್ಲಿ ಪಕ್ಷ ಸಂಘಟನೆಯಾಗುತ್ತಿದೆ. ಈ ಬಗ್ಗೆ ಕಾರ್ಯಕರ್ತರಲ್ಲಿ ಸಮಾಧಾನ ಇದೆ. ಆದರೆ ನಮ್ಮ ಪಕ್ಷದ ಕೆಲ ಹಿರಿಯ ಮುಖಂಡರು ವ್ಯತಿರಿಕ್ತವಾದ ಹೇಳಿಕೆಗಳನ್ನು ನೀಡುತ್ತಿರುವುದನ್ನು ನಾನು ಅಲ್ಲಗೆಳೆಯುವುದಿಲ್ಲ ಎಂದು ಅವರು ತಿಳಿಸಿದರು.
ನಮ್ಮಲ್ಲಿ ಜಗಳ ಇರುವುದು ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಗೆ ಮಾತ್ರ. ಅಧ್ಯಕ್ಷ ಬದಲಾದರೆ ಸಾಕು. ವಿಜಯೇಂದ್ರ ನೀನು ಸಣ್ಣ ಹುಡುಗ, ನೀನು ಅಧ್ಯಕ್ಷ ಸ್ಥಾನ ಬಿಟ್ಟು ಬೇರೆಯವರಿಗೆ ಅವಕಾಶ ಕೊಡು. ನಿನಗೆ ಏನೂ ಮಾತಾಡಬೇಕು ಎಂದು ಗೊತ್ತಾಗುವುದಿಲ್ಲ. ನೀನು ಬಚ್ಚಾ, ಅಧ್ಯಕ್ಷ ಸ್ಥಾನಕ್ಕೆ ಯೋಗ್ಯವಿಲ್ಲ.
ರಮೇಶ್ ಜಾರಕಿಹೊಳಿ, ಬಿಜೆಪಿ ಶಾಸಕ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಅದರಂತೆ, ಕರ್ನಾಟಕದಲ್ಲಿಯೂ ಪಕ್ಷದ ಚುನಾವಣೆ ನಡೆಯಲಿದೆ. ವಿಜಯೇಂದ್ರರನ್ನು ಪಕ್ಷದ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದು ವರಿಷ್ಠರ ನಿರ್ಧಾರ. ಆದರೆ, ವಿಜಯೇಂದ್ರರನ್ನು ಬಚ್ಚಾ ಎಂದು ರಮೇಶ್ ಜಾರಕಿಹೊಳಿ ಉಲ್ಲೇಖಿಸಿರುವುದು ಸರಿಯಾದುದಲ್ಲ.
ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ