ಹಾಲಿನ ದರ ಹೆಚ್ಚಿಸಿದರೆ ಪ್ರತಿಭಟನೆ: ಬಿಜೆಪಿ ಎಚ್ಚರಿಕೆ
ಬೆಂಗಳೂರು: ರಾಜ್ಯ ಸರಕಾರ ನಂದಿನಿ ಹಾಲಿನ ದರ ಏರಿಕೆ ಮಾಡಲು ಹೊರಟಿರುವುದು ಸರಿಯಲ್ಲ, ಈ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಬಿಜೆಪಿಯ ಹಾಲು ಪ್ರಕೋಷ್ಟದ ವತಿಯಿಂದ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಹಾಲು ಪ್ರಕೋಷ್ಟದ ಸಂಚಾಲಕ ರಾಘವೆಂದ್ರ ಶೆಟ್ಟಿ ಎಚ್ಚರಿಸಿದ್ದಾರೆ.
ಶನಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಮುಖ್ಯಮಂತ್ರಿ ಹಾಲಿನ ದರ ಏರಿಕೆ ಮಾಡುವಂತೆ ಸೂಚಿಸಿರುವುದು ಖಂಡನೀಯ. ಈಗಾಗಲೇ ರಾಜ್ಯದ ಜನತೆ ನೀರು, ವಿದ್ಯುತ್, ಮನೆ ಬಾಡಿಗೆ ಸೇರಿದಂತೆ ಅನೇಕ ದರ ಏರಿಕೆಯ ಆಘಾತದೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಸರಕಾರವು ಮೊದಲು ರೈತರ ಹಾಲಿನ ಸಬ್ಸಿಡಿ ಹಣ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ನಂದಿನಿ ಎಲ್ಲ ಮಾದರಿಯ ಹಾಲಿನ ದರ ಜೂನ್ನಲ್ಲೆ ಪ್ರತಿ ಲೀ.ಗೆ 2.10 ರೂ.ಹೆಚ್ಚಿಸಿ ಪರಿಷ್ಕರಿಸಲಾಗಿದೆ. ಪ್ರತಿ ಲೀ.ಟೋನ್ಡ್ ಹಾಲು 42ರೂ.ನಿಂದ 44 ರೂ.ಗೆ, ಸಮೃದ್ಧಿ ಹಾಲು 51ರಿಂದ 53ರೂ., ಶುಭಂ ಹಾಲು 48ರಿಂದ 50ರೂ.ಹೀಗೆ ದರ ಏರಿಕೆ ಮಾಡಿದ್ದಾರೆ. ಜನತೆ ನಮಗೆ 50ಎಂ.ಎಲ್ ಹೆಚ್ಚಿಗೆ ಬೇಕೆಂದು ಕೇಳಿರಲಿಲ್ಲ. ಆದರೂ ಸರಕಾರ ಭಂಡತನದಿಂದ ದರ ಏರಿಕೆ ಮಾಡಿಲ್ಲ, 50ಎಂ.ಎಲ್ ಹೆಚ್ಚಳ ನೀಡಿದ್ದೇವೆಂದು ಜನತೆಗೆ ಮಕ್ಮಲ್ ಟೋಪಿ ಹಾಕಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದು ಅವರು ಟೀಕಿಸಿದ್ದಾರೆ.