ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಹೇರಲು ಬಿಜೆಪಿಯಿಂದ ಹುನ್ನಾರ : ಡಿಸಿಎಂ ಡಿ.ಕೆ.ಶಿವಕುಮಾರ್
"ರಾಜ್ಯದ ಕಾನೂನು ಸುವ್ಯವಸ್ಥೆ ಸರಿಯಾಗಿದ್ದು, ಬಿಜೆಪಿಯವರು ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ"
ಬೆಂಗಳೂರು: "ರಾಜ್ಯದ ಕಾನೂನು ಸುವ್ಯವಸ್ಥೆ ಸರಿಯಾಗಿದ್ದು, ಬಿಜೆಪಿಯವರು ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೆ, ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇದ್ದಷ್ಟು ಈ ದೇಶದ ಯಾವ ರಾಜ್ಯದಲ್ಲೂ ಇಲ್ಲ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದೇ ಹುಬ್ಬಳ್ಳಿ ಕೊಲೆ ಪ್ರಕರಣಕ್ಕೆ ಕಾರಣ ಎನ್ನುವ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ರಾಜ್ಯಪಾಲರ ಆಡಳಿತ ಹೇರಲು ಈ ರೀತಿಯ ನಾಟಕ ಹಾಗು ಹುನ್ನಾರವನ್ನು ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಬಿಜೆಪಿಯವರು ಮಾಡುತ್ತಿದ್ದಾರೆ. ಈ ರೀತಿ ಆಗಲು ನಾವು ಬಿಡುವುದಿಲ್ಲ. ನಿಷ್ಪಕ್ಷಪಾತವಾಗಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದರು.
ಕರ್ನಾಟಕ ಬಿಹಾರ ಆಗುತ್ತದೆ ಎನ್ನುವ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಬಗ್ಗೆ ಕೇಳಿದಾಗ “ಅವರ ಕಾಲದಲ್ಲಿಯೂ ಅನೇಕ ಕೃತ್ಯಗಳು ನಡೆದಿದ್ದವು. ಎಲ್ಲರ ಕಾಲದಲ್ಲೂ ವೈಯಕ್ತಿಕ ಕಾರಣಗಳಿಗೆ ಇವು ನಡೆಯುತ್ತಿರುತ್ತವೆ. ಆದರೆ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಈ ವಿಚಾರವಾಗಿ ಹಸ್ತಕ್ಷೇಪ ಮಾಡುವುದಿಲ್ಲ. ಪೊಲೀಸರು ತಮ್ಮ ಕೆಲಸ ಮಾಡಲಿದ್ದಾರೆ” ಎಂದು ತಿಳಿಸಿದರು.