ಬಿಜೆಪಿಗೆ ನಾಲ್ಕು ವರ್ಷ ಅಧಿಕಾರದಲ್ಲಿದ್ದು ಗುಂಡಿ ಮುಚ್ಚಲಾಗಲಿಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಬೆಳಗಾವಿ: ‘ನಾವು ಅಧಿಕಾರಕ್ಕೆ ಬಂದು 6 ತಿಂಗಳಾಯಿತು. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ‘ಬ್ರ್ಯಾಂಡ್ ಬೆಂಗಳೂರು’ ಮಾಡಿದ್ದಾರೆಯೇ? ಅವರು ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ ಬೆಂಗಳೂರಿನ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ಆಗಿರಲಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
‘ಬ್ರ್ಯಾಂಡ್ ಬೆಂಗಳೂರು ಕುರಿತು ಸರಿಯಾಗಿ ಕೆಲಸಗಳು ಆಗುತ್ತಿಲ್ಲ’ ಎಂದು ಬಿಜೆಪಿ ಮಾಡಿರುವ ಆರೋಪದ ಕುರಿತು ಬುಧವಾರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹೈಕೋರ್ಟ್ನಿಂದ ಛೀಮಾರಿ ಹಾಕಿಕೊಂಡಿರುವ ಬಿಜೆಪಿಯವರಿಗೆ, ಬೆಂಗಳೂರಿನ ಬಗ್ಗೆ ಮಾತನಾಡಲು ಯಾವ ನೈತಿಕ ಹಕ್ಕಿದೆ’ ಎಂದರು.
ಉತ್ತರ ಕರ್ನಾಟಕದಲ್ಲಿ ಸದನ ನಡೆಯುತ್ತಿದ್ದರೂ ಸಚಿವರು ತೆಲಂಗಾಣದಲ್ಲಿದ್ದಾರೆ ಎಂಬ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಎಲ್ಲರೂ ಅಲ್ಲಿಲ್ಲ, ಒಂದಿಬ್ಬರು ಹೋಗಿದ್ದಾರೆ ರಾಜಕೀಯವನ್ನೂ ಮಾಡಬೇಕಲ್ಲ. ಝಮೀರ್ ಅಹ್ಮದ್ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರು ಬರಬೇಕಷ್ಟೇ ಬಹುತೇಕ ಜನ ವಾಪಸ್ಸು ಬಂದಿದ್ದಾರೆ ಎಂದರು.
ಅಭಿವೃದ್ಧಿ ಭಾಷಣವಿಲ್ಲ ಸಿದ್ದರಾಮಯ್ಯ ಕೇವಲ ಓಲೈಕೆ ಭಾಷಣ ಮಾಡುತ್ತಾರೆ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅದೆಲ್ಲ ನಿಮ್ಮಿಂದಲೇ ಆಗಿದೆ. ಎಲ್ಲ ಸಮುದಾಯಗಳು ಒಳಗೊಂಡಂತೆ ಮುಸ್ಲಿಮರನ್ನು ರಕ್ಷಣೆ ಮಾಡಲಾಗುವುದು ಎಂದು ನಾನು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.