ಸ್ಫೋಟ ಪ್ರಕರಣದ ವಿಷಯದಲ್ಲಿ ಬಿಜೆಪಿ ರಾಜಕಾರಣ ಮಾಡುವುದಿಲ್ಲ: ಬಿ.ವೈ. ವಿಜಯೇಂದ್ರ
ಬಿ.ವೈ. ವಿಜಯೇಂದ್ರ
ಬೆಂಗಳೂರು: ಸ್ಫೋಟ ಪ್ರಕರಣದ ವಿಷಯದಲ್ಲಿ ಬಿಜೆಪಿ ಯಾವುದೇ ಕಾರಣಕ್ಕೂ ರಾಜಕಾರಣ ಮಾಡುವುದಿಲ್ಲ. ಒಂದು ಜವಾಬ್ದಾರಿಯುತ ವಿಪಕ್ಷವಾಗಿ ಸರಕಾರಕ್ಕೆ ಸಂಪೂರ್ಣ ಸಹಕಾರ ಕೊಡಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ದೃಢಪಟ್ಟಿದೆ ಎಂಬ ಮಾಹಿತಿ ನಮಗಿದೆ. ಆದರೆ, ಎಲ್ಲೋ ಒಂದು ಕಡೆ ರಾಜ್ಯ ಸರಕಾರದ ವಿಳಂಬ ನೀತಿಯಿಂದ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬಂತಿದೆ. ದೇಶದ್ರೋಹಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ನಕಲಿ ಎಫ್ಎಸ್ಎಲ್ ವರದಿ ತಯಾರಿಸುವ ಅನುಮಾನವಿದೆ ಎಂದು ದೂರಿದರು.
ಸಚಿವರ ಹೇಳಿಕೆಗಳು ಕೇವಲ ಬಿಜೆಪಿ ಮಾತ್ರವಲ್ಲ, ಜನರಿಗೂ ವಿಶ್ವಾಸ ಹುಟ್ಟಿಸುವಂತಿಲ್ಲ. ವಿಧಾನಸೌಧದಲ್ಲಿ ಘೋಷಣೆ ಕೂಗಿದ ದೇಶದ್ರೋಹಿಗಳ ಬಗ್ಗೆ ಸಚಿವರು ‘ಆ ರೀತಿ ಘೋಷಣೆ ಕೂಗಿಯೇ ಇಲ್ಲ, ಬಿಜೆಪಿಯವರಿಗೆ ಮಾಡುವುದಕ್ಕೆ ಕೆಲಸ ಇಲ್ಲ’ ಎಂದಿದ್ದರು. ವಿಧಾನಸೌಧಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು ಸಿಸಿಟಿವಿ ಫೂಟೇಜ್ ಗಮನಿಸಿ ಅರ್ಧಗಂಟೆಯಲ್ಲಿ ಅವರನ್ನೆಲ್ಲ ಹಿಡಿದು ಒಳಗೆ ಹಾಕಬೇಕಿತ್ತು. ಅದನ್ನೂ ಮಾಡಿಲ್ಲ ಎಂದು ಅವರು ಆಕ್ಷೇಪಿಸಿದರು.
ಪಾಕ್ ಪರ ಘೋಷಣೆ, ರಾಮೇಶ್ವರಂ ಕೆಫೆಯಲ್ಲಿನ ಸ್ಫೋಟ ಪ್ರಕರಣದಲ್ಲಿ ಸರಕಾರದ ನಡವಳಿಕೆ ಮತ್ತು ಸಚಿವರ ಹೇಳಿಕೆಗಳು, ಕುಕ್ಕರ್ ಸ್ಫೋಟದ ಅಪರಾಧಿಗಳನ್ನು ಅಮಾಯಕರೆಂದು ಬಿಂಬಿಸುವ ಡಿಸಿಎಂ ಅವರ ಹೇಳಿಕೆಗಳು ರಾಜ್ಯದಲ್ಲಿ ಅಶಾಂತಿ ಮೂಡಲು ಕಾರಣವಾಗುತ್ತಿದೆ ಎಂದು ಅವರು ಟೀಕಿಸಿದರು.