ರಾಮಭಕ್ತರ ನೆರವಿಗೆ ಬಿಜೆಪಿ ನಿಲ್ಲಲಿದೆ: ವಿಪಕ್ಷ ನಾಯಕ ಆರ್.ಅಶೋಕ್
ಬೆಂಗಳೂರು: ಹಳೆಯ ಪ್ರಕರಣಗಳನ್ನು ಮರು ಪರಿಶೀಲಿಸುವ ಮೂಲಕ ಕಾಂಗ್ರೆಸ್ ಸರಕಾರ ರಾಮಭಕ್ತರಲ್ಲಿ ಭಯ ಹುಟ್ಟುಹಾಕುವ ಪ್ರಯತ್ನ ಮಾಡುತ್ತಿದೆ. ಆದರೆ, ರಾಮಭಕ್ತರ ನೆರವಿಗೆ ಬಿಜೆಪಿ ನಿಲ್ಲಲಿದೆ. ಇದಕ್ಕೆ ಯಾರೂ ಅಂಜಬೇಕಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಜನ್ಮಭೂಮಿ ಹೋರಾಟದಲ್ಲಿ ನಾನು ಪಾಲ್ಗೊಂಡಿದ್ದೇನೆ. ಕರಸೇವೆಗೆ ಯಾರು ಹೋಗಿದ್ದಾರೆಂದು ಈಗ ಪೊಲೀಸರು ಹುಡುಕುತ್ತಿದ್ದಾರೆ. ಈ ಮೂಲಕ ರಾಮಭಕ್ತರಿಗೆ ಸಂದೇಶ ನೀಡುತ್ತಿದ್ದಾರೆ. ರಾಮಮಂದಿರ ಉದ್ಘಾಟಿಸುವ ಸಮಯದಲ್ಲೇ ಹಳೆ ಪ್ರಕರಣ ಪರಿಶೀಲನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಈ ರೀತಿ ದಾಳಿ ನಡೆಯುತ್ತಿದೆ. ಆದರೆ ರಾಮಭಕ್ತರಿಗೆ ಕಷ್ಟ ಬರದಂತೆ ಬಿಜೆಪಿ ಅವರ ನೆರವಿಗೆ ನಿಲ್ಲಲಿದೆ ಎಂದು ಅಭಯ ನೀಡಿದರು.
ಶ್ರೀರಾಮಮಂದಿರ ಉದ್ಘಾಟನೆಯಾಗಲು 20 ದಿನ ಬಾಕಿ ಇದೆ. ಪ್ರತಿ ಮನೆಗಳಲ್ಲಿ ದೀಪ ಹಚ್ಚಿ, ಮಂತ್ರಾಕ್ಷತೆ ವಿತರಿಸಿ ಸಂಭ್ರಮಾಚರಣೆಯಾಗುತ್ತಿದೆ. ಈ ಕುರಿತು ಪ್ರಧಾನಿ ಮೋದಿ ಕರೆ ನೀಡಿದ್ದು, ರಾಜ್ಯದಲ್ಲಿ ಕೋಟ್ಯಂತರ ಜನರು ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
‘ಹಳೆ ಪ್ರಕರಣ ಎಂದ ಮೇಲೆ ಡಿಜೆ ಹಳ್ಳಿ, ಕೆಜಿ ಹಳ್ಳಿಯ ಪ್ರಕರಣ, ಪಿಎಫ್‍ಐ ಮೊದಲಾದ ದೇಶದ್ರೋಹಿ ಸಂಘಟನೆಗಳ ಪ್ರಕರಣಗಳನ್ನು ಪೊಲೀಸರು ಈಗ ಪರಿಶೀಲಿಸಬೇಕಿತ್ತು. ಮುಚ್ಚಿ ಹಾಕಿದ ಪ್ರಕರಣಗಳನ್ನು ಮತ್ತೆ ತೆಗೆದಿದ್ದರೆ ಯಾರು ತಪ್ಪಿತಸ್ಥರು ಎಂದು ಗೊತ್ತಾಗುತ್ತಿತ್ತು. ರಾಮಭಕ್ತರು ದೇಶದ್ರೋಹಿ ಸಂಘಟನೆಗಳ ರೀತಿಯಲ್ಲಿ ಪಾಕಿಸ್ತಾನದಿಂದ ಹಣ ಪಡೆದು ಚಟುವಟಿಕೆ ನಡೆಸಿಲ್ಲ. ಸರಕಾರ ದೇಶದ್ರೋಹಿಗಳ ಹಳೆ ಪ್ರಕರಣ ಪರಿಶೀಲನೆ ಮಾಡುವುದಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದರು.