ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ ಹಗರಣ ಪ್ರಕರಣ: ಬಿಜೆಪಿಯ ಡಿ.ಎಸ್.ವೀರಯ್ಯ ಜು.30ರ ವರೆಗೆ ನ್ಯಾಯಾಂಗ ಬಂಧನ
ಬೆಂಗಳೂರು: ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ ನಿಯಮಿತ(ಡಿಡಿಯುಟಿಟಿಎಲ್)ದ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಿಯಮಿತದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಅವರನ್ನು ಜು.30ರವರೆಗೂ ನ್ಯಾಯಾಂಗ ಬಂಧನಕ್ಕೆ ವಹಿಸಿ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.
ಡಿ.ಎಸ್.ವೀರಯ್ಯ ಅವರ ಸಿಐಡಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಪ್ರಕರಣದ ಮಾಹಿತಿ ಪಡೆದ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶರು 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಮತ್ತೊಂದೆಡೆ ಡಿ.ಎಸ್.ವೀರಯ್ಯ ಅವರ ಪರ ವಕೀಲ ಶ್ಯಾಮ್‍ಸುಂದರ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.
2021-23ರ ನಡುವಿನ ಅವಧಿಯಲ್ಲಿ ಡಿ.ಎಸ್.ವೀರಯ್ಯ ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ ನಿಯಮಿತ(ಡಿಡಿಯುಟಿಟಿಎಲ್)ದ ಅಧ್ಯಕ್ಷರಾಗಿದ್ದಾಗ 47.10 ಕೋಟಿ ರೂ. ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ನಿಯಮಿತದ ಹಾಲಿ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಸಾದ್ ಅವರು ನಗರದ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸುಮಾರು 2 ಕೋಟಿ ರೂ. ಮೌಲ್ಯದ ಕೆಲಸಗಳನ್ನು ಟೆಂಡರ್ ಕರೆಯದೇ ಗುತ್ತಿಗೆ ನೀಡಬಹುದು ಎನ್ನುವ ರೀತಿಯಲ್ಲಿ ನಿಯಮಿತದ ದಾಖಲೆಗಳನ್ನು ತಿರುಚಲಾಗಿದೆ ಎಂಬುದಾಗಿ ಆರೋಪಿಸಲಾಗಿತ್ತು.
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆಯಡಿ ಸರಕಾರದ ಯಾವುದೇ ನಿಗಮವು ಐದು ಲಕ್ಷಕ್ಕೂ ಹೆಚ್ಚು ಮೌಲ್ಯದ ಗುತ್ತಿಗೆ ಕೆಲಸವನ್ನು ಟೆಂಡರ್ ಮೂಲಕ ನಡೆಸಬೇಕು ಎಂದಿದೆ. ಇದಕ್ಕೆ ವಿರುದ್ಧವಾಗಿ ಗುತ್ತಿಗೆ ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯು ಡಿ.ಎಸ್.ವೀರಯ್ಯ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ತನಿಖೆ ಸಂಬಂಧ ಅವರನ್ನು ವಶಕ್ಕೆ ಪಡೆದುಕೊಂಡಿತ್ತು.