ಇನ್ನು ಮುಂದೆ ಬಿಜೆಪಿಯ ʼಆಪರೇಷನ್ ಕಮಲʼ ಸಕ್ಸಸ್ ಆಗಲ್ಲ: ಸಚಿವ ಮಧು ಬಂಗಾರಪ್ಪ
ಶಿವಮೊಗ್ಗ, ಅ.28: ಇನ್ನುಮುಂದೆ ಬಿಜೆಪಿಯ ಎಲ್ಲಾ ಪ್ರಜಾಪ್ರಭುತ್ವ ವಿರೋಧಿ ಆಪರೇಷನ್‌ಗಳಿಗೆ ಯಶಸ್ಸು ಸಿಗದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ಮಂಡ್ಯ ರವಿ ಬಿಜೆಪಿಯಿಂದ 50 ಕೋಟಿ ರೂ. ಆಫರ್ ಬಂದಿದ್ದು, ಹಲವು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸ ಲಾಗಿದೆ. ಉನ್ನತ ಸ್ಥಾನಮಾನ ಮುಂತಾದ ಆಮಿಷ ಒಡ್ಡಲಾಗಿದೆ ಎಂದು ಆರೋಪಿಸಿರುವ ಬಗ್ಗೆ ಉತ್ತರಿಸಿದ ಅವರು, ʼಬಿಜೆಪಿಯ ಈ ತಂತ್ರಗಾರಿಕೆ ಹೊಸತೇನಲ್ಲ. ಆದರೆ ಅದು ಅಟ್ಟರ್ ಫ್ಲಾಪ್ ಆಗಿದೆ. ಕಾಂಗ್ರೆಸ್‌ನ ಒಬ್ಬನೇ ಒಬ್ಬ ಶಾಸಕ ಪಕ್ಷ ಬಿಡುವುದಿಲ್ಲ. ಮತ್ತು ಆಮಿಷಕ್ಕೆ ಒಳಗಾಗುವುದಿಲ್ಲʼ ಎಂದರು.
ಮುಖ್ಯಮಂತ್ರಿಗಳು ಕೂಡ ಬದಲಾಗುವ ಸಾಧ್ಯತೆ ಇದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ʼಅದು ಅವರ ವೈಯಕ್ತಿಕ ಅಭಿಪ್ರಾಯ. ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಇದೆ. ಮುಖ್ಯಮಂತ್ರಿ ವಿಚಾರವನ್ನು ಅವರೇ ತೀರ್ಮಾನಿಸುತ್ತಾರೆ. ನಾವ್ಯಾರೂ ಹೈಕಮಾಂಡ್ ವಿರುದ್ಧ ಮಾತನಾಡಲು ಹೋಗುವು ದಿಲ್ಲʼ ಎಂದರು.
ಎಸ್‌ಡಿಎಂಸಿಗಳು ಶಾಲೆಗಳಲ್ಲಿ ರಾಜಕೀಯ ತರುತ್ತಿದ್ದಾರೆ. ಕೆಲವು ಉಪನ್ಯಾಸಕಿಯರಿಗೆ ಕಿರುಕುಳ ನೀಡುತ್ತಿದ್ದಾರೆ. ಎಸ್‌ಡಿಎಂಸಿ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಾ ಶಾಲೆಗಳಲ್ಲೂ ನೂರಕ್ಕೆ ನೂರು ಎಸ್‌ಡಿಎಂಸಿ ಇರಲೇಬೇಕು. ಶಾಲಾ ಆಡಳಿತ ಮಂಡಳಿ ಏನಾದರೂ ರಾಜಕೀಯಕ್ಕಾಗಿ ದುರುಪಯೋಗಪಡಿಸಿಕೊಂಡರೆ ನಮ್ಮ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಎಸ್‌ಡಿಎಂಸಿಗಳು ಶಾಲೆಗೆ ಮಾತ್ರ ಸೀಮಿತವಾಗಿರಬೇಕು. ರಾಜಕೀಯ ಪ್ರೇರಿತವಾಗಿರಬಾರದು ಎಂದರು.
ನ.8ರಂದು ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದ್ದು, ದೇಶದ ಹೆಸರಾಂತ 40ಕ್ಕೂ ಹೆಚ್ಚು ಕಂಪೆನಿಗಳು ಈ ಮೇಳದಲಿ ಭಾಗ ವಹಿಸಲಿವೆ. ಯುವಕ ಯುವತಿ ಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಇಸ್ರೇಲ್ ನಲ್ಲಿ ಸಂತ್ರಸ್ತರಾದ ಶಿವಮೊಗ್ಗದ ಇಂದಿರಾ ಬಡಾವಣೆಯ ಯುವಕ ಸ್ವಾಮಿ ಎಂಬುವರ ದೂರವಾಣಿ ಕರೆ ಸ್ವೀಕರಿಸಿ ಸ್ಪಂದಿಸಿದ ಸಚಿವರು, ರಾಜ್ಯ ಸರ್ಕಾರ ಯಾವುದೇ ರೀತಿಯ ನೆರವು ನೀಡಲು ಸಿದ್ಧವಿದೆ. ಆತಂಕಕ್ಕೊಳಗಾಗದೆ ಧೈರ್ಯವಾಗಿರುವಂತೆ ಮತ್ತು ಅಗತ್ಯ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂಬ ಭರವಸೆ ನೀಡಿದರು.