ಬಿಜೆಪಿಯ ಧರ್ಮ ರಾಜಕಾರಣದಿಂದ ಸಮಾಜ, ದೇಶಕ್ಕೆ ಒಳ್ಳೆಯದಾಗುವುದಿಲ್ಲ: ಯತೀಂದ್ರ ಸಿದ್ಧರಾಮಯ್ಯ
ಮೈಸೂರು: ಬಿಜೆಪಿಯ ಧರ್ಮ ರಾಜಕಾರಣದಿಂದ ಜನರು, ಸಮಾಜ ಅಥವಾ ದೇಶಕ್ಕೆ ಒಳ್ಳೇಯದಾಗುವುದಿಲ್ಲ. ಹಾಗಾಗಿ ಧರ್ಮ ರಾಜಕಾರಣ ತಪ್ಪೆಂದು ಹೇಳುತ್ತಿದ್ದೇನೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಭಾರತ ಹಿಂದೂ ರಾಷ್ಟ್ರವಾದರೆ ದೇಶಕ್ಕೆ ಅಪಾಯಕಾರಿ ಎಂಬ ಹೇಳಿಕೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ದೇಶದಲ್ಲಿ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಿದ ದೇಶಗಳು ನಾಶವಾಗಿದೆ. ಜನರು ಕೆಲಸದ ಆಧಾರದ ಮೇಲೆ ಸರ್ಕಾರವನ್ನು ಆಯ್ಕೆ ಮಾಡಬೇಕು. ರಾಜಕಾರಣಿಗಳು ಧರ್ಮದ ಕೆಲಸ ಮಾಡಬೇಕಿಲ್ಲ. ಅದಕ್ಕೆ ಬೇರೆಯ ವ್ಯವಸ್ಥೆ ಇದೆ ಎಂದು ಹೇಳಿದರು.
ಬಿಜೆಪಿ ಅಭಿವೃದ್ಧಿಯನ್ನೇ ಮಾಡದೆ ಧರ್ಮದ ಹೆಸರಿನಲ್ಲಿ ರಾಜಕಾರಣ ನಡೆಸುತ್ತಿದೆ. ಧರ್ಮದ ವಿಚಾರ ಮುಂದಿಟ್ಟುಕೊಂಡು ಇತರ ವಿಚಾರಗಳನ್ನು ಆ ಪಕ್ಷದವರು ಮರೆಮಾಚುತ್ತಿದ್ದಾರೆ ಎಂದರು.
ಹಿಂದೂ ರಾಷ್ಟ್ರ ವಿಚಾರವಾಗಿ ಅಂಬೇಡ್ಕರ್ ಹೇಳಿರುವುದನ್ನು ನಾನು ಹೇಳಿದ್ದೇನೆ. ಸಂವಿಧಾನದ ಪೀಠಿಕೆಯಲ್ಲಿ ನಂಬಿಕೆ ಇರುವವರು ಅದನ್ನು ತಪ್ಪೆಂದು ಭಾವಿಸುವುದಿಲ್ಲ. ನಮ್ಮ ದೇಶ ಜಾತ್ಯಾತೀತ ರಾಷ್ಟ್ರ. ಯಾವುದೇ ಒಂದು ಧರ್ಮದ ವಿಚಾರವಾಗಿ ದೇಶ ಇರಬಾರದು. ಅಂಬೇಡ್ಕರ್ ಮೇಲೆ ನಂಬಿಕೆ ಇದ್ದರೆ ನನ್ನ ಹೇಳಿಕೆಯನ್ನು ನಂಬುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರತಾಪ್ ಸಿಂಹ ನ್ಯಾಷನಲ್ ಲೀಡರಾ?: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸದ ಪ್ರತಾಪಸಿಂಹ ಅವರನ್ನು ಟಾರ್ಗೆಟ್ ಮಾಡಲು ಪ್ರತಾಪಸಿಂಹ ಏನು ನ್ಯಾಷನಲ್ ಲೀಡರಾ? ಅವರು ತಮನ್ನು ತಾವೇ ದೊಡ್ಡ ನಾಯಕನೆಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಅವರು 45 ವರ್ಷ ರಾಜಕೀಯ ಜೀವನದಲ್ಲಿ ಯಾವತ್ತೂ ಕೂಡ ಒಬ್ಬರ ಮೇಲೂ ಹಗೆ ಸಾಧಿಸಿಲ್ಲ. ಅನ್ಯಾಯ ಮಾಡಿದವರನ್ನು ಸಹಿಸಿಕೊಂಡಿದ್ದಾರೆ. ಪ್ರತಾಪಸಿಂಹ ಸಹೋದರ ವಿಕ್ರಂಸಿಂಹ ತಪ್ಪು ಮಾಡಿರುವುದಕ್ಕೆ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಂಬಂಧ ಯಾವುದೇ ನಿಲುವು ಇಟ್ಟುಕೊಂಡಿಲ್ಲ. ಆಕಾಂಕ್ಷೆಯೂ ಅಲ್ಲ. ಅಲ್ಲದೇ ಟಿಕೆಟ್ ಕೊಡುವಂತೆ ಪಕ್ಷವನ್ನು ಕೇಳಿಲ್ಲ. ಯಾರೂ ಸ್ಪರ್ಧೆ ಎಂಬುದನ್ನೂ ವರಿಷ್ಠರು ತೀರ್ಮಾನ ಮಾಡುತ್ತಾರೆ. ಒಂದು ವೇಳೆ ಪಕ್ಷ ನಿಲ್ಲುವಂತೆ ಸೂಚಿಸಿದರೆ ತೀರ್ಮಾನ ಮಾಡಬೇಕಾಗುತ್ತದೆ.
-ಡಾ.ಯತೀಂದ್ರ ಸಿದ್ದರಾಮಯ್ಯ