ರಾಜ್ಯದ 28 ಲೋಕಸಭಾ ಸ್ಥಾನದಲ್ಲೂ ಬಿಜೆಪಿ ಗೆಲುವು ಖಚಿತ: ನಳಿನ್ ಕುಮಾರ್ ಕಟೀಲ್
ಬೆಂಗಳೂರು: ರಾಜ್ಯದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎಲ್ಲ 28 ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಆಚರಣೆ ಹಾಗೂ ಕಾಂಗ್ರೆಸ್ ಸರಕಾರದ ವೈಫಲ್ಯವನ್ನು ಖಂಡಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರವಾಸದ ಪ್ರಾರಂಭದ ಹಿನ್ನೆಲೆಯಲ್ಲಿ “ಕೋಲಾರದ ಮುಳುಬಾಗಿಲಿನ ಕುರುಡುಮಲೆ ಗಣಪತಿ ದೇವಸ್ಥಾನ”ದಲ್ಲಿ ಮಹಾಪೂಜೆಯ ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ʼʼಯಡಿಯೂರಪ್ಪ ಅವರ ಸಂಕಲ್ಪದಂತೆ ಮೋದಿಜಿ ಅವರಿಗೆ ಬಲ ತುಂಬಲು ಕುರುಡುಮಲೆ ಗಣಪತಿಗೆ ಆರಾಧನೆ ಮಾಡಿ ಭ್ರಷ್ಟ ಸರಕಾರದ ವಿರುದ್ಧ ಹೋರಾಟ ಆರಂಭ ಮಾಡುತ್ತಿದ್ದೇವೆ. ಒಂಬತ್ತೂವರೆ ವರ್ಷಗಳಲ್ಲಿ ಮೋದಿಜಿ ಅವರು ಭ್ರಷ್ಟಾಚಾರರಹಿತ ಆಡಳಿತವನ್ನು ನೀಡಿದ್ದಾರೆ. ಸಾಮಾನ್ಯ ಜನರಿಗೆ ಬಲ ತುಂಬುವ ಹಲವಾರು ಯೋಜನೆಗಳನ್ನು ನರೇಂದ್ರ ಮೋದಿಯವರ ಸರಕಾರ ನೀಡಿದೆ ಎಂದು ವಿಶ್ಲೇಷಿಸಿದರು. ಸ್ವನಿಧಿ ಯೋಜನೆ, ವಿಶ್ವಕರ್ಮ ಯೋಜನೆಗಳನ್ನು ಇವತ್ತು ಅನುಷ್ಠಾನ ಮಾಡಲಾಗುತ್ತಿದೆʼʼ ಎಂದು ವಿವರಿಸಿದರು.
ʼʼರಾಜ್ಯದ ಸಿದ್ದರಾಮಣ್ಣ ಸರಕಾರವು ಯಡಿಯೂರಪ್ಪ- ಬಸವರಾಜ ಬೊಮ್ಮಾಯಿಯವರ ರೈತ ಪರ ಯೋಜನೆಗಳನ್ನು ವಾಪಸ್ ಪಡೆದಿದೆ ಎಂದು ಟೀಕಿಸಿದರು. ಕಿಸಾನ್ ಸಮ್ಮಾನ್ ಯೋಜನೆಯಡಿ 6 ಸಾವಿರವನ್ನು ಕೇಂದ್ರ ಹಾಗೂ ಯಡಿಯೂರಪ್ಪರ ಸರಕಾರ 4 ಸಾವಿರ ನೀಡುತ್ತಿತ್ತು. ಆ ಪೈಕಿ 4 ಸಾವಿರ ನೀಡುವುದನ್ನು ರಾಜ್ಯದ ಕಾಂಗ್ರೆಸ್ ಸರಕಾರ ನಿಲ್ಲಿಸಿದ್ದು, ರೈತವಿರೋಧಿ ನೀತಿ ಪ್ರದರ್ಶಿಸಿದೆʼʼ ಎಂದು ಆಕ್ಷೇಪಿಸಿದರು.
ʼʼಬೊಮ್ಮಾಯಿಯವರ ಸರಕಾರದ ರೈತ ವಿದ್ಯಾನಿಧಿಯನ್ನೂ ವಾಪಸ್ ಪಡೆಯುವ ಕೆಲಸ ನಡೆದಿದೆ. ಬರ- ನೀರಿನ ಸಮಸ್ಯೆಯಿಂದ ರೈತರು ಒದ್ದಾಡುವಂತಾಗಿದೆ. ಆದರೆ, ನಿರಂತರ ವಿದ್ಯುತ್ ಕಡಿತದ ಕೊಡುಗೆಯನ್ನು ಈ ಸರಕಾರ ನೀಡಿದೆ ಎಂದು ಆರೋಪಿಸಿದರು. ರಾತ್ರಿ 12 ಗಂಟೆವರೆಗೆ ಕಾದರೂ ಕರೆಂಟಿಲ್ಲ ಎಂಬ ದುಸ್ಥಿತಿ ಬಂದಿದೆʼʼ ಎಂದು ಬೇಸರ ಸೂಚಿಸಿದರು.
ʼʼಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಸಲಾಗುತ್ತಿದೆ. ರೈತರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುವ ಸಿದ್ದರಾಮಣ್ಣ ಕರ್ನಾಟಕದ ಮುಖ್ಯಮಂತ್ರಿಯೇ ಅಥವಾ ತಮಿಳುನಾಡಿನ ಮುಖ್ಯಮಂತ್ರಿಯೇ ಎಂದು ಉತ್ತರಿಸಲಿ ಎಂದು ಆಗ್ರಹಿಸಿದರು.
ಕೇಸು ಕೊಟ್ಟವರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಗುತ್ತಿಗೆದಾರರ ಬಾಕಿ ಬಿಲ್ ವಿಚಾರದಲ್ಲೂ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಕೆಲವೇ ತಿಂಗಳಲ್ಲಿ ಸರಕಾರದ ವಿರುದ್ಧ ಜನಾಕ್ರೋಶ ಹೆಚ್ಚಾಗಿದೆ. ರಿಕ್ಷಾ, ಕಾರು, ಟ್ಯಾಕ್ಸಿ ಚಾಲಕರಿಗೆ ಸಮಸ್ಯೆಯಾಗಿದೆ. ಉದ್ಯಮಿಗಳು ರಾಜ್ಯ ಬಿಟ್ಟು ಹೋಗುತ್ತಿದ್ದಾರೆ. ಈ ಸರಕಾರ ಭ್ರಷ್ಟಚಾರ, ರೈತವಿರೋಧಿ ಸರಕಾರ ಎಂದು ಟೀಕಿಸಿದರು.
ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹಿರಿಯ ಮುಖಂಡರಾದ ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಸಂಸದ ಮುನಿಸ್ವಾಮಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಸಚಿವರಾದ ಡಾ.ಅಶ್ವತ್ಥನಾರಾಯಣ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜಿಲ್ಲಾಧ್ಯಕ್ಷ ವೇಣುಗೋಪಾಲ್ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.