ವಂಚನೆ ಪ್ರಕರಣ | ಪ್ರಧಾನಿಗಳ ಮೌನಕ್ಕೆ ಜೋಶಿ ಕುಟುಂಬ ಕೊಟ್ಟ ಇನಾಮೆಷ್ಟು : ಬಿ.ಕೆ.ಹರಿಪ್ರಸಾದ್
"ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆಯ ಬಿಟ್ಟಿ ಪಾಠ ಮಾಡವ ಜೋಶಿಗೆ ಈಗ ನೈತಿಕತೆ ಪ್ರಶ್ನೆ ಕಾಡುತ್ತಿಲ್ಲವೇ?"
ಬೆಂಗಳೂರು: " ʼನಾ ಖಾವುಂಗಾ ನಾ ಖಾನೇ ದೂಂಗಾʼ ಎನ್ನುವ ಪ್ರಧಾನಿಗಳ ಮೌನಕ್ಕೆ ಜೋಶಿ ಕುಟುಂಬ ಕೊಟ್ಟ ಇನಾಮೆಷ್ಟು?" ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಆರೋಪದ ಮೇಲೆ ಕೇಂದ್ರ ಸಚಿವ ಪ್ರಹ್ಲಾದ್ ಸಹೋದರ ಗೋಪಾಲ್ ಜೋಶಿ, ಸಹೋದರಿ ವಿಜಯ ಲಕ್ಷ್ಮೀ ಜೋಶಿ ಸಹಿತ ಮೂವರ ವಿರುದ್ಧ ಸುನೀತಾ ಚವ್ಹಾಣ್ ಎಂಬುವರು ನೀಡಿದ ದೂರಿನನ್ವಯ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಬಿ.ಕೆ.ಹರಿಪ್ರಸಾದ್ ಅವರು, "ಬಿಜೆಪಿ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಮೋದಿ ಸರಕಾರದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಕುಟುಂಬ ಮತ್ತು ಗ್ಯಾಂಗ್ 2 ಕೋಟಿ ವಸೂಲಿ ಮಾಡಿದೆ. ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆಯ ಬಿಟ್ಟಿ ಪಾಠ ಮಾಡುವ ಜೋಶಿಗೆ ಈಗ ನೈತಿಕತೆಯ ಪ್ರಶ್ನೆ ಕಾಡುತ್ತಿಲ್ಲವೇ? ʼನಾ ಖಾವುಂಗಾ ನಾ ಖಾನೇ ದುಂಗಾʼ ಎನ್ನುವ ಪ್ರಧಾನಿಗಳ ಮೌನಕ್ಕೆ ಜೋಶಿ ಕುಟುಂಬ ಕೊಟ್ಟ ಇನಾಮೆಷ್ಟು? ಎಂದು ಅವರು ಪ್ರಶ್ನಿಸಿದ್ದಾರೆ.