ಜಾತಿಗಣತಿಗೆ ವರದಿಗೆ ಕಾಂಗ್ರೆಸ್ ನಾಯಕರಲ್ಲಿಯೂ ವಿರೋಧ ಇರಬಹದು : ಬಿ.ಕೆ.ಹರಿಪ್ರಸಾದ್
PC:x/@HariprasadBK2
ಬೆಂಗಳೂರು : ರಾಹುಲ್ ಗಾಂಧಿಯವರು ಶೇ.50ರಷ್ಟು ಇರುವ ಮೀಸಲಾತಿಯನ್ನು ಶೇ.75ರಷ್ಟು ಮಾಡುತ್ತೇವೆ ಮತ್ತು ಜಾತಿಗಣತಿಯನ್ನು ಮಾಡುತ್ತೇವೆ ಎನ್ನುವ ತೀರ್ಮಾನವನ್ನು ಮಾಡಿದ್ದಾರೆ. ಇದಕ್ಕೆ ಕೆಲವು ಪ್ರಮುಖ ನಾಯಕರು ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್ನಲ್ಲಿಯೂ ವಿರೋಧ ಮಾಡುವವರು ಇರಬಹುದು ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ನಗರದ ಕೆಪಿಸಿಸಿ ಕಚೇರಿಯಲ್ಲಿರುವ ಭಾರತ್ ಜೋಡೊ ಸಭಾಂಗಣದಲ್ಲಿ ನಡೆದ ಇಂದಿರಾ ಗಾಂಧಿ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸಮಾಜವಾದ ಸಿದ್ಧಾಂತವನ್ನು ಅನುಷ್ಠಾನಕ್ಕೆ ತರಬೇಕಾದರೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯಗಳು ಸಿಗಬೇಕು. ಈ ಬಗ್ಗೆ ಇಂದಿರಾ ಗಾಂಧಿ ಅವರು ತೀರ್ಮಾನ ಮಾಡಿದಾಗ ಬ್ಯಾಂಕ್ ರಾಷ್ಟ್ರೀಕರಣ, ಭೂಸುಧಾರಣೆ ಕಾನೂನು, ಜೀತ ಪದ್ಧತಿ ನಿಷೇಧ ಸೇರಿ ಹಲವು ಕಾರ್ಯಕ್ರಮಗಳನ್ನು ರೂಪಿಸುವಾಗ ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕರೇ ವಿರೋಧೀಸಿದ್ದರು ಎಂದು ತಿಳಿಸಿದರು.
ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾಂಗ್ರೆಸ್ ತೀರ್ಮಾನಿಸಿದಾಗ ಪಕ್ಷ ವಿಭಜನೆ ಆದರೂ ಕೂಡ ಇಂದಿರಾಗಾಂಧಿ ಅವರು ಧೈರ್ಯವಾಗಿ ಅದನ್ನು ಎದುರಿಸಿ ದೇವರಾಜ ಅರಸು ಅವರನ್ನು ಪ್ರದೇಶ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದರು. ಬ್ಯಾಂಕ್ ರಾಷ್ಟ್ರೀಕರಣ, ಭೂ ಸುಧಾರಣೆ ಕಾಯ್ದೆ, ಜೀತ ಪದ್ಧತಿ ನಿರ್ಮೂಲನೆ ಸೇರಿ 9 ಅಂಶಗಳ ಕಾರ್ಯಕ್ರಮ ಮಾಡಿದಾಗ ಕರ್ನಾಟಕದಲ್ಲಿ ರೆಡ್ಡಿ ಕಾಂಗ್ರೆಸ್, ಮತ್ತು ಅರಸು ಕಾಂಗ್ರೆಸ್ ಆಗಿ ಇಬ್ಬಾಗ ಆಯಿತು. ಇಂದಿರಾ ಗಾಂಧಿ ಮತ್ತು ಕರ್ನಾಟಕಕ್ಕೆ ಅವಿನಾಭಾವ ಸಂಬಂಧವಿದೆ. ಕ್ರಾಂತಿಕಾರಿ ತೀರ್ಮಾನಗಳನ್ನು ಕಾಂಗ್ರೆಸ್ ಪಕ್ಷ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಜೀವ್ ಗಾಂಧಿ ಅವರು ಮಾಡಿದ್ದಾರೆ. ಅದಕ್ಕೆ ಹಲವು ವಿರೋಧ ವ್ಯಕ್ತ ಆಗಬಹುದು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪರ, ವಿರೋಧ, ಮಾಡುವ ಅವಕಾಶವಿದೆ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಸಿದ್ಧಾಂತ ಮತ್ತು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಲ್ಲಿ ಸೋನಿಯಾ ಗಾಂಧಿ ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು. ಮಹಿಳೆಯರು ಧೈರ್ಯವಾಗಿ ಮುಂದೆ ಹೋಗಬೇಕು. ನಿಮ್ಮ ಹಕ್ಕುಗಳನ್ನು ಪ್ರತಿಪಾದನೆ ಮಾಡಬೇಕಾದರೆ ಮುಂದೆ ಇರಬೇಕು. ಆಗ ಮಾತ್ರ ಮಹಿಳೆಯರಿಗೂ ಶೇ.50ರಷ್ಟು ಮೀಸಲಾತಿ ಸಿಗುತ್ತದೆ ಎಂದು ತಿಳಿಸಿದರು.