ರಾಜಭವನಕ್ಕೆ ಬಾಂಬ್ ಬೆದರಿಕೆ: ಪೊಲೀಸರ ಕ್ರಿಯಾಶೀಲತೆ ತಿಳಿಯಲು ಹುಸಿ ಕರೆ ಮಾಡಿದ್ದಾಗಿ ಒಪ್ಪಿಕೊಂಡ ಆರೋಪಿ
ಆರೋಪಿ ಭಾಸ್ಕರ್
ಬೆಂಗಳೂರು: ಬಾಂಬ್ ಕರೆ ಬಂದಾಗ ಪೊಲೀಸರು ಎಷ್ಟರ ಮಟ್ಟಿಗೆ ಕ್ರಿಯಾಶೀಲರಾಗುತ್ತಾರೆ ಎಂಬುದನ್ನು ತಿಳಿಯಲು ಹುಸಿ ಬಾಂಬ್ ಕರೆ ಮಾಡಿರುವುದಾಗಿ ರಾಜಭವನಕ್ಕೆ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ ಮಾಡಿದ್ದ ಆರೋಪಿ ಹೇಳಿಕೆ ನೀಡಿದ್ದಾನೆ ಎಂದು ಕೇಂದ್ರ ವಿಭಾಗ ಡಿಸಿಪಿ ಶೇಖರ್ ಟೆಕ್ಕಣ್ಣನವರ್ ತಿಳಿಸಿದ್ದಾರೆ.
ರಾಜಭವನಕ್ಕೆ ಬಾಂಬ್ ಇಟ್ಟಿರುವುದಾಗಿ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಸಹಾಯವಾಣಿಗೆ ಕರೆ ಮಾಡಿ ಹುಸಿ ಬಾಂಬ್ ಬೆದರಿಕೆ ಹಾಕಿರುವ ಪ್ರಕರಣ ಸಂಬಂಧ ಮಾತನಾಡಿದ ಡಿಸಿಪಿ ಶೇಖರ್ ಟೆಕ್ಕಣ್ಣನವರ್, ಕೋಲಾರ ಮೂಲದ ಆರೋಪಿ ಭಾಸ್ಕರ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಬಾಂಬ್ ಬೆದರಿಕೆ ಸಂದೇಶ ಬಂದಾಗ ಪೊಲೀಸರ ಜಾಗೃತಿ, ಎಚ್ಚರಿಕೆಯನ್ನು ಪರೀಕ್ಷಿಸುವ ಸಲುವಾಗಿ ಕರೆ ಮಾಡಿರುವುದಾಗಿ ಹೇಳಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದರು.
ಡಿ.11ರಂದು ರಾತ್ರಿ 11.35ಕ್ಕೆ ಎನ್ಐಎಗೆ ಅನಾಮಿಕ ಕರೆ ಮಾಡಿ ರಾಜಭವನಕ್ಕೆ ಬಾಂಬ್ ಇಟ್ಟಿರುವುದಾಗಿ ವ್ಯಕ್ತಿ ಹೇಳಿದ್ದ. ಎನ್ಐಎ ಅಧಿಕಾರಿಗಳು ಬೆಂಗಳೂರು ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದರು. ಈ ಸಂಬಂಧ ವಿಧಾನಸೌಧ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿರಲಿಲ್ಲ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ಈ ಹಿಂದೆ ಯಾವುದೇ ಕ್ರಿಮಿನಲ್ ಕೇಸ್ ದಾಖಲಾಗಿಲ್ಲ ಎಂದು ಡಿಸಿಪಿ ಶೇಖರ್ ಟೆಕ್ಕಣ್ಣನವರ್ ತಿಳಿಸಿದರು.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ವಡ್ಡಹಳ್ಳಿ ಗ್ರಾಮದವನಾದ ಭಾಸ್ಕರ್ ಬಿ.ಕಾಂ. ಪದವೀಧರನಾಗಿದ್ದು ವ್ಯವಸಾಯ ಮಾಡುತ್ತಿದ್ದ. ಇತ್ತೀಚೆಗೆ ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ಮೇಲ್ ಬಂದ ಸುದ್ದಿಯನ್ನು ತಿಳಿದುಕೊಂಡಿದ್ದ. ಈ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದ ಬಗ್ಗೆಯೂ ತಿಳಿದುಕೊಂಡಿದ್ದ. ನಾಲ್ಕು ದಿನದ ಹಿಂದೆ ಈತ ಊರಿನಿಂದ ಬೆಂಗಳೂರಿಗೆ ಬಂದಿದ್ದ ಎಂದು ಡಿಸಿಪಿ ಶೇಖರ್ ಟೆಕ್ಕಣ್ಣನವರ್ ಹೇಳಿದರು.
ಇದೇ ವೇಳೆ ನಗರದಿಂದ ಊರಿಗೆ ತೆರಳಲು ಬಸ್ ಹೋಗುವಾಗ ರಾಜಭವನ ಕಂಡಿದ್ದಾನೆ. ಮೊಬೈಲ್ನಲ್ಲಿ ಎಎನ್ಐ ಸಹಾಯವಾಣಿಗೆ ಕರೆ ಮಾಡಿ ರಾಜಭವನದಲ್ಲಿ ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದ. ಬೆದರಿಕೆ ಕರೆಯಿಂದ ಗಾಬರಿಯಾದ ಎನ್ಐಎ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಡಿಸಿಪಿ ಶೇಖರ್ ಟೆಕ್ಕಣ್ಣನವರ್ ತಿಳಿಸಿದರು
ಇನ್ನೊಂದೆಡೆ ಬೆಂಗಳೂರಿನಿಂದ ನೇರವಾಗಿ ಆಂಧ್ರದ ಚಿತ್ತೂರಿನ ದೇವಸ್ಥಾನವೊಂದಕ್ಕೆ ಆರೋಪಿ ತೆರಳಿದ್ದ. ಬಾಂಬ್ ಬೆದರಿಕೆ ಕರೆ ನಂತರ ಕರೆ ಬಂದ ನೆಟ್ವರ್ಕ್ ಟ್ರ್ಯಾಕ್ ಮಾಡುತ್ತಿದ್ದ ವಿಧಾನಸೌಧ ಠಾಣೆ ಪೊಲೀಸರಿಗೆ ಆರೋಪಿ ಚಿತ್ತೂರಿನಿಂದ ತನ್ನೂರಿಗೆ ವಾಪಸ್ ಬರುತ್ತಿರುವುದನ್ನು ಅರಿತು ಭಾಸ್ಕರ್ ನನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಡಿಸಿಪಿ ಶೇಖರ್ ಟೆಕ್ಕಣ್ಣನವರ್ ಮಾಹಿತಿ ನೀಡಿದರು.