ಸಿದ್ದರಾಮಯ್ಯ ಅವರು ಐದು ವರ್ಷ ಅಧಿಕಾರದಲ್ಲಿ ಇರುತ್ತಾರೋ ಇಲ್ಲವೋ ಗೊತ್ತಿಲ್ಲ : ಬಿ.ಆರ್.ಪಾಟೀಲ್
ಬಿ.ಆರ್.ಪಾಟೀಲ್
ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷ ಅಧಿಕಾರದಲ್ಲಿ ಇರುತ್ತಾರೋ ಇಲ್ಲವೋ ಗೊತ್ತಿಲ್ಲ. ಅವರೇ ಐದೂ ವರ್ಷ ಸಿಎಂ ಆಗಿರಬೇಕೆಂದು ನಾನು ಬಯಸುತ್ತೇನೆ. ಆದರೆ, ಪಕ್ಷದ ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ತಿಳಿಯದು’ ಎಂದು ಮುಖ್ಯಮಂತ್ರಿ ಸಲಹೆಗಾರ ಹಾಗೂ ಹಿರಿಯ ಶಾಸಕ ಬಿ.ಆರ್.ಪಾಟೀಲ್ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಇನ್ನೂ ದೊಡ್ಡ ಜವಾಬ್ದಾರಿ ನೀಡಬಹುದು. ಆದರೆ, ಸಿದ್ದರಾಮಯ್ಯರನ್ನು ಬದಲಾವಣೆ ಮಾಡಬೇಕು ಎಂದು ಪಕ್ಷದ ಯಾವುದೇ ಶಾಸಕರ ಮನಸ್ಸಿನಲ್ಲಿ ಇಲ್ಲ’ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಬಜೆಟ್ನಲ್ಲಿ ಸರಕಾರದ ಐದೂ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಹೊರೆ ಆಗದಂತೆ ಹೊಸ ಆರ್ಥಿಕ ನೀತಿಯತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನ ನೀಡಲಿದ್ದಾರೆಂದು ನಮಗೆ ಮೊದಲೇ ಗೊತ್ತಿತ್ತು. ಇಷ್ಟು ಮೊತ್ತ ಖರ್ಚಾಗುತ್ತದೆ ಎಂದು ಅವರು ತೀರ್ಮಾನಿಸಿದ್ದರು. ಆರ್ಥಿಕ ಸಮಸ್ಯೆ ಕರ್ನಾಟಕ ರಾಜ್ಯಕ್ಕೆ ಮಾತ್ರವೇ ಇಲ್ಲ. ದೇಶದ ಎಲ್ಲ ರಾಜ್ಯಗಳಲ್ಲೂ ಇದೆ. ಇತ್ತೀಚೆಗೆ ಸಮಸ್ಯೆ ಆಗುತ್ತಿದೆ, ಅಲ್ಲದೆ, ಸ್ವಲ್ಪ ಹೊರೆ ಆಗುತ್ತದೆ. ದೊಡ್ಡ ಸಮಸ್ಯೆ ನಿವಾರಣೆಗೆ ಕೈಹಾಕಿದಾಗ ಸ್ವಲ್ಪ ಸಮಸ್ಯೆ ಸಹಜ. ಆದರೆ, ಕಲ್ಯಾಣ ರಾಜ್ಯದ ಪರಿಕಲ್ಪನೆ ಕಾಣುತ್ತಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ ಗ್ಯಾರಂಟಿಗಳು ಯಶಸ್ವಿಯಾಗಿ ಅನುಷ್ಠಾನ ಆಗುತ್ತಿವೆ. ಇದರಿಂದ ರಾಜಕೀಯ ಲಾಭ ಆಗುತ್ತಿದೆ. ನಮ್ಮ ಮಾದರಿಯನ್ನೇ ಪ್ರಧಾನಿ ಮೋದಿ ಅನುಸರಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲುವುದಿಲ್ಲ. ಇದರಲ್ಲಿ ಯಾವುದೇ ಅನುಮಾನ ಬೇಡ. ಬಿಪಿಎಲ್ ಕಾರ್ಡ್ ವಿವಾದ ಬಿಜೆಪಿ ಹುಟ್ಟಿಸಿದ ಭಯ. ಆದರೆ ಗ್ಯಾರಂಟಿಗಳು ನಿಲ್ಲುವುದಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ವಕ್ಫ್ ಆಸ್ತಿ ವಿಚಾರದಲ್ಲಿ ಬಿಜೆಪಿಯ ಅವಧಿಯಲ್ಲೇ ನೋಟಿಸ್ ನೀಡಲಾಗಿತ್ತು. ಆದರೆ, ಇಂದು ದುರುದ್ದೇಶದಿಂದ ನಮ್ಮ ಸರಕಾರಕ್ಕೆ ಕೆಟ್ಟ ಹೆಸರು ತರಬೇಕೆಂಬ ಉದ್ದೇಶದಿಂದ ಪ್ರತಿಭಟನೆ ನಾಟಕ ಮಾಡಲಾಗುತ್ತಿದೆ. ಬಿಜೆಪಿಯವರು ಮೊದಲು ತಮ್ಮ ಪಕ್ಷದಲ್ಲಿನ ಒಡಕನ್ನು ಸರಿಪಡಿಸಿಕೊಳ್ಳಲಿ ಎಂದು ಪಾಟೀಲ್ ವಾಗ್ದಾಳಿ ನಡೆಸಿದರು.