ಸಿದ್ದರಾಮಯ್ಯ ಸರ್ಕಾರ ಅನುದಾನ ಕೊಟ್ಟ ಬೆಂಗಳೂರು ಕಂಬಳಕ್ಕೆ ಲೈಂಗಿಕ ಕಿರುಕುಳ ಕಳಂಕ ಹೊತ್ತ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅತಿಥಿ
ಕಾಂಗ್ರೆಸ್, ಶಾಸಕ ಅಶೋಕ್ ರೈ ವಿರುದ್ಧ ಆಕ್ರೋಶ: ಕಂಬಳದ ಐತಿಹಾಸಿಕ ಹಿನ್ನೆಲೆ ಬಗ್ಗೆಯೂ ಪರಾಮರ್ಶೆ!
ಬಿಜೆಪಿ ಸಂಸದ ಬ್ರಿಜ್ ಭೂಷಣ್ (PTI)
ಬೆಂಗಳೂರು: ಪುತ್ತೂರಿನ ಕಾಂಗ್ರೆಸ್ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಎರಡು ದಿನಗಳ ಕಂಬಳಕ್ಕೆ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಕಳಂಕವನ್ನು ಹೊತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅವರನ್ನು ಆಹ್ವಾನಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಕಂಬಳ ಆಯೋಜಕರ ಪ್ರಕಾರ, ನವೆಂಬರ್ 25 ರಂದು ಸ್ಥಳೀಯ ಕುಸ್ತಿಪಟುಗಳನ್ನು ಬ್ರಿಜ್ ಭೂಷಣ್ ಅಭಿನಂದಿಸಲಿದ್ದಾರೆ ಎನ್ನಲಾಗಿದೆ. ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿಯನ್ನೇ ಕುಸ್ತಿಪಟುಗಳಿಗೆ ಅಭಿನಂದನೆ ಸಲ್ಲಿಸಲು ಕರೆಸುವ ಬೆಂಗಳೂರು ಕಂಬಳ ಸಮಿತಿಯ ನಡೆಯನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಬೆಂಗಳೂರು ಕಂಬಳ ಸಮಿತಿ ಎಂಬ ಖಾಸಗಿ ಗುಂಪು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರೂ, ಕಾಂಗ್ರೆಸ್ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆಯುವ ಹಾಗೂ ಕರ್ನಾಟಕ ಸರ್ಕಾರ ಕೂಡ ಈ ಕಂಬಳಕ್ಕಾಗಿ ಒಂದು ಕೋಟಿ ರೂ. ಘೋಷಣೆ ಮಾಡಿರುವುದರಿಂದ ಸಹಜವಾಗಿಯೇ ಕಾಂಗ್ರೆಸ್ ವಿರುದ್ಧವೂ ಆಕ್ರೋಶ ತಿರುಗಿದೆ.
“ಬೆಂಗಳೂರು ಕಂಬಳ: ಮುಖ್ಯಾಂಶಗಳು
ಕಂಬಳ ಸಮಿತಿ ಅಧ್ಯಕ್ಷ- ಕಾಂಗ್ರೆಸ್ ಶಾಸಕ ಅಶೋಕ್ ರೈ (ಸಂಘಪರಿವಾರದ ವ್ಯಕ್ತಿ)
ಸಂಘಟನಾ ಅಧ್ಯಕ್ಷ- ಬಿಜೆಪಿ ಮುಖಂಡ, ಉಮೇಶ್ ಶೆಟ್ಟಿ.
ಮಾಧ್ಯಮ ಸಂಯೋಜಕ- ಹಾಲಿ ಬಿಜೆಪಿ ವಕ್ತಾರ
ಉದ್ಘಾಟನೆ- ಬಿಜೆಪಿ ಮುಖಂಡ ಯಡಿಯೂರಪ್ಪ
ಮುಖ್ಯ ಅತಿಥಿ- ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ (ಲೈಂಗಿಕ ಕಿರುಕುಳ ಆರೋಪಿ)
₹1 ಕೋಟಿ ಅನುದಾನ - ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರ.
ಕಾಂಗ್ರೆಸ್ ಕಾರ್ಯಕರ್ತರೇ ನಿದ್ದೆಯಿಂದ ಎದ್ದೇಳಿ. ನಿಮ್ಮ ನಾಯಕರನ್ನು ಪ್ರಶ್ನೆ ಮಾಡಿ. ಇಲ್ಲಾಂದ್ರೆ ನಿಮ್ಮ ಕೈಗೆ ಚಿಪ್ಪು.” ಎಂದು ಪತ್ರಕರ್ತೆ ಹೇಮಾ ವೆಂಕಟ್ ಅವರು ಬರೆದಿದ್ದಾರೆ.
ಪತ್ರಕರ್ತ ನವೀನ್ ಸೂರಿಂಜೆಯವರು ಕೂಡಾ ಈ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ ಲೇಖನ ಬರೆದಿದ್ದು, ಕಂಬಳದ ಕರಾಳ ಇತಿಹಾಸದ ಕಡೆಗೂ ಬೆಳಕು ಹಾಯಿಸಿದ್ದಾರೆ.
ʼಕಂಬಳಕ್ಕೆ ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷನ್ ಸಿಂಗ್ ಸರಿಯಾದ ಆಯ್ಕೆʼ ಎಂದು ವ್ಯಂಗ್ಯವಾಡಿರುವ ನವೀನ್ ಸೂರಿಂಜೆ, “ಬ್ರಿಜ್ ಭೂಷನ್ ಸಿಂಗ್ ನ ಕ್ರೀಡಾ ಇತಿಹಾಸಕ್ಕೂ ಕಂಬಳದ ಕ್ರೀಡಾ ಇತಿಹಾಸಕ್ಕೂ ಸಾಮ್ಯತೆ ಇದೆ. ಒಂದು ಕಾಲದಲ್ಲಿ ಕಂಬಳಕ್ಕಿಂತ ಮುಂಚಿನ ದಿನ ರಾತ್ರಿ ಕಂಬಳದ ಗದ್ದೆಯ ಪಕ್ಕದ ಗದ್ದೆಯಲ್ಲಿ ಅತ್ಯಂತ ಹಿಂದುಳಿದ, ಸೂಕ್ಷ್ಮ ಸಮುದಾಯವೊಂದರ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಶೋಷಿಸಲಾಗುತ್ತಿತ್ತು. ಇದಕ್ಕೆ ಸಾಂಸ್ಕೃತಿಕ, ಧಾರ್ಮಿಕ ಆಯಾಮವನ್ನೂ ನೀಡಲಾಗಿತ್ತು. ತುಳುನಾಡಿನ ಜಾತಿ ವ್ಯವಸ್ಥೆಯಲ್ಲಿ ಬಹಿರಂಗವಾಗಿ ನಡೆಯುತ್ತಿದ್ದ ಈ ಲೈಂಗಿಕ ಶೋಷಣೆ ಈಗ ಸಂವಿಧಾನದ ಭಯದಿಂದ ನಿಂತಿದೆಯಷ್ಟೆ. ಇಂತವೆಲ್ಲಾ ಕಂಬಳದ ಭಾಗವಾಗಿತ್ತು ಎಂಬ ಕನಿಷ್ಠ ಪಶ್ಚಾತಾಪವೂ ಇಲ್ಲದೇ ಕಂಬಳವು ತುಳುನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕ ಎಂದು ಹೇಳುವವರ ವೇದಿಕೆಗೆ ಬ್ರಿಜ್ ಭೂಷನ್ ಸಿಂಗ್ ಸೂಕ್ತ ವ್ಯಕ್ತಿ” ಎಂದಿದ್ದಾರೆ.
ಮುಂದುವರೆದು, “ಕಂಬಳ ಎಂಬುದು ಕೇವಲ ಕ್ರೀಡೆಯಾಗಿ ಪ್ರಾರಂಭವೂ ಆಗಿಲ್ಲ. ಮುಂದುವರಿಕೆಯೂ ಅಲ್ಲ. ಕಂಬಳ ಎಂಬುದು ಜಮೀನ್ದಾರಿಗಳ ಐಶಾರಾಮಿ ಬದುಕಿನ ಪಳಿಯುಳಿಕೆಯಾಗಿ ಮುಂದುವರೆಯುತ್ತಿದೆ. ಕಂಬಳ ಎಂಬುದು ಬಹುಜನರ ಸಂಸ್ಕೃತಿಯೂ ಅಲ್ಲ. ಜನಪದ ಕ್ರೀಡೆಯೂ ಅಲ್ಲ. ಕಂಬಳ ಎಂಬುದು ಪಕ್ಕಾ ಬಹುಜನ ವಿರೋಧಿ ಫ್ಯೂಡಲ್ ವರ್ಗದ ಮೋಜಿನ ಆಟವಷ್ಟೆ. ಹಾಗಾಗಿ ಕಂಬಳದ ಅತಿಥಿಗಳ ಆಯ್ಕೆಯೂ ಸರಿಯಾಗಿದೆ” ಎಂದು ನವೀನ್ ಸೂರಿಂಜೆ ಅವರು ಬರೆದಿದ್ದಾರೆ.
ಪತ್ರಕರ್ತ ಬಾಪು ಅಮ್ಮೆಂಬಳ ಕೂಡಾ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. “ಬ್ರಿಜ್ ಭೂಷಣ್ ನಮ್ಮ ಮಣ್ಣಿಗೆ ಕಾಲಿಡುವಾಗ ಅವರ ವಿರುದ್ದ ಹೋರಾಟ ನಡೆಸುತ್ತಿರುವ ನಮ್ಮ ಹೆಮ್ಮೆಯ ಕ್ರೀಡಾಪಟುಗಳನ್ನು ಕರೆದು ರ್ಯಾಲಿ ನಡೆಸಿ ಕರ್ನಾಟಕ ನಿಮ್ಮ ಜೊತೆಗೆ ಇದೆ ಎಂದು ಗಟ್ಟಿಯಾಗಿ ಹೇಳಬೇಕು. ಮೌನವಾಗಿದ್ದರೆ ಈ ಕಾಂಗ್ರೆಸ್ಸಿಗರು ನಮ್ಮನ್ನೂ ಅವರ ಜೊತೆಗೆ ಸೇರಿಸಿ ಬಿಡುತ್ತಾರೆ” ಎಂದು ಅವರು ಕಿಡಿ ಕಾರಿದ್ದಾರೆ. “ಬಿಜೆಪಿ ರೀತಿಯ ಪಕ್ಷಗಳು ನಮ್ಮ ದೇಶದಲ್ಲಿ ಇಲ್ಲದಿರುತ್ತಿದ್ದರೆ ಕಾಂಗ್ರೆಸ್ ಎಂಬ ಸೋಗಲಾಡಿ ಪಕ್ಷಕ್ಕೆ ಮತ ಬಿಡಿ, ಅದರ ಕಡೆಗೆ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ ನಾನು.” ಎಂದು ತಮ್ಮ ಇನ್ನೊಂದು ಪೋಸ್ಟಿನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
"ಬೆಂಗಳೂರು ಕಂಬಳ (ತುಳುನಾಡಿನ ಜನಪದ ವೈಭವವನ್ನು ಜಗತ್ತಿಗೆ ಪರಿಚಯಿಸುವ ಯೋಜನೆ ಎಂಬುದು ಆಯೋಜಕರ ಮಾತು) ದಲ್ಲಿ ತುಳುನಾಡಿನ ಮೂಲ ನಿವಾಸಿಗಳೂ, ಅತ್ಯಂತ ದಮನಿತರೂ ಆದ ಕೊರಗ ಸಮುದಾಯ, ಮೊಗೇರ,ಮುಂಡಾಲ ಮುಂತಾದ ದಲಿತ ಸಮುದಾಯದ ಪ್ರತಿನಿಧಿಗಳನ್ನೂ ಉಳಿದ "ಗಣ್ಯಾತಿಗಣ್ಯ" ಸೆಲೆಬ್ರಿಟಿಗಳ ಜೊತೆ ವೇದಿಕೆಯಲ್ಲಿ ಅತಿಥಿಗಳಾಗಿ ಆಹ್ವಾನಿಸುತ್ತೀರಾ ?" ಎಂದು ಪ್ರಶ್ನಿಸಿದ್ದೆ. ಇವರು ನೋಡಿದರೆ ಮಹಿಳಾ ಕುಸ್ತಿ ಪಟುಗಳ ಲೈಂಗಿಕ ದೌರ್ಜನ್ಯದ ಆರೋಪಿ, ಬಿಜೆಪಿ ಮಸಲ್ ಮ್ಯಾನ್ ಬ್ರಿಜ್ ಭೂಷಣ್ ನನ್ನು ಪ್ರಧಾನ ಅತಿಥಿಯಾಗಿ ಕರೆದಿದ್ದಾರಂತೆ. ಕಂಬಳ ಎಂಬುದು ತುಳುನಾಡಿನ ಬಂಟ, ಬಿಲ್ಲವ, ಕುಲಾಲ, ದೇವಾಡಿಗ, ಬ್ಯಾರಿ, ಪೊರ್ಬು, ಮುಂಡಾಲ, ಮುಗೇರ, ಆದಿ ದ್ರಾವಿಡ, ಕೊರಗರು ಸಹಿತ ನೆಲದ ಜೊತೆ, ಕೃಷಿಯ ಜೊತೆ ಸಂಬಂಧ ಹೊಂದಿರುವ ಸಕಲ ಜಾತಿ ಸಮುದಾಯಗಳ ಸಾಂಸ್ಕೃತಿಕ ಆಚರಣೆ ಎಂಬ ಮಾತಿತ್ತು. ಬೆಂಗಳೂರಿನಲ್ಲಿ ಅದು "ದೊಡ್ಡವರ, ಜಮೀನ್ದಾರರ, ಫ್ಯೂಡಲ್ ಸಂಸ್ಕೃತಿಯೆಂಬಂತೆ ಚಿತ್ರಣಗೊಳ್ಳುತ್ತಿದೆ” ಎಂದು ರಾಜ್ಯ ಡಿವೈಎಫ್ಐ ಅಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ಟೀಕಿಸಿದ್ದಾರೆ.
ಬ್ರಿಜ್ ಭೂಷಣ್ ಅವರನ್ನು ಕಂಬಳಕ್ಕೆ ಆಹ್ವಾನಿಸುತ್ತಿರುವ ಬಗ್ಗೆ ʼವಾರ್ತಾಭಾರತಿʼ ಶಾಸಕ ಅಶೋಕ್ ರೈಯವರನ್ನು ಸಂಪರ್ಕಿಸಿದಾಗ, “ಸಿದ್ದಿ ಜನಾಂಗದ ಸಂಘಟನೆಯವರು ಬಂದು ಬ್ರಿಜ್ ಭೂಷಣ್ ಅವರನ್ನು ಕರೆಯುವಂತೆ ತಿಳಿಸಿದರು. ಎಲ್ಲ ಜಾತಿ ಜನಾಂಗದವರ ಮುಖಂಡರನ್ನು ಕರೆಯಲಾಗುತ್ತಿದೆ. ಸಮುದಾಯದ ಕೋರಿಕೆ ಮೇರೆಗೆ ಬ್ರಿಜ್ ಭೂಷಣ್ ಅವರನ್ನು ಆಹ್ವಾನಿಸಲಾಗಿದೆ” ಎಂದು ತಿಳಿಸಿದ್ದಾರೆ.
ಆದರೆ, ಕರಾವಳಿಯ ಕಂಬಳಕ್ಕೂ, ಕರ್ನಾಟಕದ ಸಿದ್ಧಿ ಜನಾಂಗಕ್ಕೂ, ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರಿಗೂ ಎತ್ತಣಿಂದೆತ್ತ ಸಂಬಂಧ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಲೇಖಕ, ಕೃಷಿಕ ಎಲ್ಸಿ ನಾಗರಾಜ್ ಅವರು ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳದ ಬಗ್ಗೆ ಬೇರೆಯದ್ದೇ ಆಯಾಮವನ್ನು ತೆರೆದಿಟ್ಟಿದ್ದು, “ನೀರಿನ ಕೊರತೆ ಇರುವ ಬೆಂಗಳೂರಿನಲ್ಲಿ ಕಂಬಳ ಏರ್ಪಡಿಸಿದ್ದೇ ಸಾಂಸ್ಕೃತಿಕ ದರಿದ್ರ; ಈಗ ಬ್ರಿಜ್ ಭೂಷಣ ಬರುವುದು ಕರ್ನಾಟಕ ಸರ್ಕಾರದ ದಟ್ಟ ದರಿದ್ರ” ಎಂದಿದ್ದಾರೆ.