ಯತ್ನಾಳ್‌ಗೆ ನೀಯತ್ತಿಲ್ಲ, ಜೆಡಿಎಸ್ ಗೆ ಹೋಗಿದ್ದ ಅವರನ್ನು ವಾಪಾಸ್ ಕರೆತಂದಿದ್ದು ಬಿಎಸ್ ವೈ : ರೇಣುಕಾಚಾರ್ಯ ವಾಗ್ದಾಳಿ
ದಾವಣಗೆರೆ : ಜೆಡಿಎಸ್‍ಗೆ ಹೋದ ಯತ್ನಾಳ್ ಅವರನ್ನು ಯಡಿಯೂರಪ್ಪ ಕರೆತಂದರು ಆದರೆ ಈ ಬಗ್ಗೆ ಆ ಮನುಷ್ಯನಿಗೆ ನಿಯತ್ತು ಅನ್ನೋದೇ ಇಲ್ಲ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯತ್ನಾಳ್ ಬಗ್ಗೆ ನಾನು ಮಾತನಾಡುವುದಕ್ಕೂ ಅಸಹ್ಯವಾಗುತ್ತದೆ. ಆನೆ ಬೀದಿಗೆ ಬಂದಾಗ ಹುಚ್ಚು ನಾಯಿ ಬೊಗಳುತ್ತೆ. ಅದರೆ, ಆನೆ ಗೌರವ ಕಡಿಮೆಯಾಗಲ್ಲ. ನಾಯಿಗೆ ಇರುವ ನಿಯತ್ತು ಆ ಮನುಷ್ಯನಿಗೆ ಇಲ್ಲ. ಜೆಡಿಎಸ್‍ಗೆ ಹೋದವರನ್ನು ಯಡಿಯೂರಪ್ಪ ಕರೆತಂದರು. ವಿಜಯೇಂದ್ರ, ಯಡಿಯೂರಪ್ಪ ಅವರನ್ನು ಟೀಕೆ ಮಾಡಿದರೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ವರಿಷ್ಠ ರನ್ನು ಟೀಕೆ ಮಾಡಿದಂತೆ ಎಂದರು.
ಕಾಂಗ್ರೆಸ್ ಮುಖಂಡರಿಗೆ ಟಿಪ್ಪು, ಬಾಬರ್, ಔರಂಗಜೇಬು, ಘಜ್ನಿ ಮಹಮ್ಮದ್ ಹೆಸರು ಮಾತ್ರ ನೆನಪು ಬರುತ್ತದೆ. ಅವರ ಶಾಸಕರು ಸಚಿವರು ಟಿಪ್ಪು ವಿನ ಹೆಸರು ಜಪ ಮಾಡುತ್ತಾರೆ. ಬೇಕಾದರೆ ನಿಮ್ಮ ಮನೆಗಳಿಗೆ ಟಿಪ್ಪು ನಿಲಯ, ಘಜ್ನಿ, ಔರಂಗಜೇಬ ನಿಲಯ ಎಂದು ಇಟ್ಟುಕೊಳ್ಳಿ. ಆದರೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡುವುದನ್ನು ವಿರೋಧಿಸುತ್ತೇವೆ. ಮೈಸೂರು ಮಹಾರಾಜ, ಸುತ್ತೂರು ಶ್ರೀಗಳ ಸೇರಿದಂತೆ ದಾರ್ಶನಿಕರ ಹೆಸರು ಇಡಿ ಎಂದು ಹೇಳಿದರು.
ಸರಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ 25 ಸಾವಿರ ರೂಪಾಯಿ ಪರಿಹಾರ ಕೊಡಿ. ಘೋಷಣೆ ಮಾಡಿದ ಭರವಸೆಗಳು ಭರವಸೆಯಾಗಿಯೇ ಉಳಿದಿವೆ. ಈ ಸರ್ಕಾರ ಬಂದಾಗಿನಿಂದ ವಿಧ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಬಿಡುಗಡೆಯಾಗಿಲ್ಲ. ರೈತರಿಗೆ ನೌಕರರಿಗೆ ನೀವು ನೀಡಿದ ಭರವಸೆ ಈಡೇರಿಲ್ಲ ಎಂದರು.