ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಪಕ್ಕಕ್ಕೆ ಸರಿಸುವ ಕೆಲಸವನ್ನು ಬಿಎಸ್‌ವೈ ಮಾಡುತ್ತಿದ್ದಾರೆ : ಕೆ.ಎಸ್ ಈಶ್ವರಪ್ಪ
ಪುತ್ರನಿಗೆ ಹಾವೇರಿ ಟಿಕೆಟ್ ಕೈತಪ್ಪಿದ್ದರಿಂದ ಯಡಿಯೂರಪ್ಪ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಡಿಸಿಎಂ
ಶಿವಮೊಗ್ಗ: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಪುತ್ರ ಕಾಂತೇಶ್ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಬೇಸರಗೊಂಡಿರುವ ಕೆ.ಎಸ್ ಈಶ್ವರಪ್ಪ ಬಹಿರಂಗವಾಗಿಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರೇ ನೇರವಾಗಿ ಪುತ್ರನ ಹಾವೇರಿ ಟಿಕೆಟ್ ತಪ್ಪಿಸುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
"ತಮ್ಮ ಮಗ ಹಾವೇರಿಯಲ್ಲಿ ಓಡಾಡಲಿ, ಟಿಕೆಟ್ ಕೊಡಿಸುತ್ತೇನೆ. ನಾನೇ ಓಡಾಡಿ ಗೆಲ್ಲಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದರು. ಇವತ್ತು ಮೋಸ ಮಾಡಿದ್ದಾರೆ. ಯಾಕೆ ಅನ್ನುವುದು ಗೊತ್ತಿಲ್ಲ. ಕಾರ್ಯಕರ್ತರಿಗೆ ನೋವಾಗಿದೆ. ಪಕ್ಷವೂ ಉಳಿಯಬೇಕು, ಕಾರ್ಯಕರ್ತರ ನೋವಿನ ಧ್ವನಿಯೂ ಆಗಬೇಕು" ಎಂದರು.
ʼತಮ್ಮ ತೀರ್ಮಾನವನ್ನು ತಮ್ಮ ಪಕ್ಷದ ಹಿರಿಯರು ಹಾಗೂ ಕಾರ್ಯಕರ್ತರ ಜೊತೆಗೆ ಮಾತನಾಡಿ ತೀರ್ಮಾನ ಮಾಡುತ್ತೇನೆ. ರಾಧಾ ಮೋಹನ್ ಅಗರ್ ಲಾಲ್ ಅವರು ಬೆಂಗಳೂರಿಗೆ ಕರೆದಿದ್ದಾರೆ. ಈಗ ಏಕೆ ಹೋಗಲಿ, ಟಿಕೆಟ್ ಘೋಷಣೆ ಮಾಡಿಯಾಗಿದೆ. ಯಾಕೆ ಹೋಗಿ ಮಾತನಾಡಲಿ ಏನು ಲಾಭವಿದೆʼ ಎಂದು ಅಸಮಾಧಾನ ಹೊರಹಾಕಿದ್ದಾರೆ.
"ಪಕ್ಷೇತರರಾಗಿ ನಿಲ್ಲಬೇಕು, ನಿಮ್ಮನ್ನು ಗೆಲ್ಲಿಸುತ್ತೇವೆ ಎಂಬ ಬಹಳ ಒತ್ತಡ ಇದೆ. ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನಿಸುತ್ತೇನೆ. ನಾನು ಪಾರ್ಟಿ ಬಿಟ್ಟು ಹೋಗುತ್ತೇನೆ ಎಂದಾಗಲಿ, ಪಕ್ಷೇತರನಾಗಿ ನಿಲ್ಲುತ್ತೇನೆ ಎಂದು ಹೇಳಿಲ್ಲ. ಅಭಿಪ್ರಾಯ ಸಂಗ್ರಹ ಮಾಡುತ್ತೇನೆ " ಎಂದು ಹೇಳಿದ್ದೇನೆ ಎಂದರು.
ನಾನು ಜಾತಿ ನಾಯಕ ಎಂದು ಹೇಳಿಲ್ಲ. ಅದು ಹೆಮ್ಮೆಯ ವಿಚಾರ, ಹಿಂದುತ್ವದ ಪ್ರತಿಪಾದನೆ ಮಾಡಿದ್ದೇನೆ. ಬಿಜೆಪಿ ನಾಯಕರಿಗೆ ಯಡಿಯೂರಪ್ಪನವರು ಮೋಸ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆಯವರ ಟಿಕೆಟ್ ಯಾರ ಕೈಯಲ್ಲಿ ಇತ್ತು. ಬೊಮ್ಮಾಯಿಯವರು ನಾನು ನಿಲ್ಲೋದಿಲ್ಲ ಎಂದಿದ್ದರು, ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ಸಾಕಷ್ಟು ಜನರನ್ನು ಹಿಂದೆ ಸರಿಸಿದ್ದಾರೆ. ತಾಯಿ ಕುತ್ತಿಗೆ ಹಿಚುಕುವ ಕೆಲಸ ಮಾಡುತ್ತಿದ್ದಾರೆ. ಪ್ರತಾಪ್ ಸಿಂಹ , ಸಿಟಿ ರವಿ, ನಳೀನ್ ಕುಮಾರ್ ಕಟೀಲ್ , ಸದಾನಂದ ಗೌಡ ಹೀಗೆ ಸಾಕಷ್ಟು ಜನರಿಗೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.
ಬಸವರಾಜ್ ಬೊಮ್ಮಾಯಿಯವರೇ ಚುನಾವಣಾ ಸಮಿತಿಯಲ್ಲಿ ಕಾಂತೇಶ್ ಅವರನ್ನು ಹಾವೇರಿಯಲ್ಲಿ ನಿಲ್ಲಿಸಿ ಎಂದು ಹೇಳಿದ್ದರು. ಅವರನ್ನೇ ಒತ್ತಾಯ ಮಾಡಿಸಿ ಚುನಾವಣೆಗೆ ಯಾಕೆ ನಿಲ್ಲಿಸುತ್ತಿದ್ದಾರೆ. ಪಕ್ಷದ ನಿಷ್ಟಾವಂತ ಕಾರ್ಯಕರ್ತರನ್ನು ಪಕ್ಕಕ್ಕೆ ಸರಿಸುವಂತಹ ಕೆಲಸವನ್ನು ಯಡಿಯೂರಪ್ಪನವರು ಮಾಡುತ್ತಿದ್ದಾರೆ ಎಂಬ ಭಾವನೆ ಹಲವರಲ್ಲಿ ಬಂದಿದೆ. ಈ ಸಂಬಂಧ ತಮ್ಮ ಹಿತೈಷಿಗಳ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುತ್ತೇನೆ ಎಂದರು.