ಬಾಬುಸಾಬ್ ಪಾಳ್ಯದ ಕಟ್ಟಡ ಕುಸಿತ ದುರಂತ : ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಚೆಕ್ ವಿತರಿಸಿದ ಸಚಿವ ಸಂತೋಷ್ ಲಾಡ್
ಬಾಬುಸಾಬ್ ಪಾಳ್ಯದಲ್ಲಿ ಸಂಭವಿಸಿದ ಕಟ್ಟಡ ಕುಸಿತ ದುರಂತ
ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನ ಬಾಬುಸಾಬ್ ಪಾಳ್ಯದಲ್ಲಿ ಸಂಭವಿಸಿದ್ದ ಕಟ್ಟಡ ಕುಸಿತ ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಪರಿಹಾರದ ಚೆಕ್ ಅನ್ನು ಸೋಮವಾರ ವಿಕಾಸಸೌಧದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ವಿತರಿಸಿದ್ದಾರೆ.
ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿತದಿಂದಾಗಿ ಮೃತಪಟ್ಟ ಕಟ್ಟಡ ಕಾರ್ಮಿಕರಾದ ಮುಹಮ್ಮದ್ ಅರ್ಮಾನ್, ರಾಮ್ ಕ್ರಿಪಾಲ್ ಮತ್ತೋ, ಮುಹಮ್ಮದ್ ಸಾಹಿಲ್, ಸುಲೋ ಪಾಸ್ವಾನ್, ತುಳಸಿ ರೆಡ್ಡಿ, ಆದಿದ್ರಾವಡ್ ಮಣಿಕಂಠಲ್ ಲಕ್ಷ್ಮಣಬಾಯ್, ಪೂಲ್ಚಂದ್ ಯಾದವ್ ಮತ್ತು ಸತ್ಯರಾಜ್ ಅವರ ಕುಟುಂಬಗಳಿಗೆ ತಲಾ 2.ಲಕ್ಷ ರೂ.ಗಳ ಪರಿಹಾರ ಚೆಕ್ ಹಾಗೂ 4ಸಾವಿರ ರೂ. ಅಂತ್ಯಕ್ರಿಯಾ ವೆಚ್ಚವನ್ನು ಸಚಿವ ಸಂತೋಷ್ ಲಾಡ್ ನೀಡಿದರು.
ಚೆಕ್ ವಿತರಣೆ ಬಳಿಕ ಸಚಿವ ಸಂತೋಷ್ ಲಾಡ್ ಅಧ್ಯಕ್ಷತೆಯಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ 43ನೇ ಮಂಡಳಿ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಮಂಡಳಿಯ ಸದಸ್ಯರಾದ ಎಚ್.ಜಿ.ರಮೇಶ್, ವಿಜಯ ಕುಮಾರ್ ಪಾಟೀಲ್, ಶ್ರೇಯಸ್ ಕುಮಾರ್ ಜೈನ್, ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ವಿ.ಪ್ರಸಾದ್, ಕಾರ್ಮಿಕ ಆಯುಕ್ತ ಗೋಪಾಲಕೃಷ್ಣ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ, ಉಪ ಕಾರ್ಯದರ್ಶಿ ಸಂಗಪ್ಪ ಉಪಾಸೆ, ಜಂಟಿ ಕಾರ್ಮಿಕ ಆಯುಕ್ತ ಜಾನ್ಸನ್ ಉಪಸ್ಥಿತರಿದ್ದರು.