ಉಪಚುನಾವಣೆ | ಚನ್ನಪಟ್ಟಣದಲ್ಲಿ ʼಕೈʼ ಹಿಡಿದ ಮತದಾರ : ಸಿ.ಪಿ.ಯೋಗೇಶ್ವರ್ಗೆ ಜಯ
ಸಿ.ಪಿ.ಯೋಗೇಶ್ವರ್
ಬೆಂಗಳೂರು: ರಾಜ್ಯದ ಉಪಚುನಾವಣೆಯ ಅಖಾಡದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ದಳಪತಿಗಳ ಭದ್ರಕೋಟೆಯನ್ನು ಭೇದಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆಲುವಿನ ನಗಾರಿ ಬಾರಿಸಿದ್ದಾರೆ.
ಕೊನೇ ಕ್ಷಣದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ಗೆ ಸೇರ್ಪಡೆಯಾಗಿ ಅಖಾಡಕ್ಕಿಳಿದಿದ್ದ ಸಿ.ಪಿ.ಯೋಗೇಶ್ವರ್ ರನ್ನು ಬೊಂಬೆನಾಡಿನ ಮತದಾರರು ‘ಕೈ’ ಹಿಡಿದಿದ್ದು, ಅತ್ತ ಎನ್ಡಿಎ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿಗೆ ಮೂರನೇ ಬಾರಿಯೂ ಮುಖಭಂಗವಾಗಿದೆ. ನಿಖಿಲ್ ಈ ಹಿಂದೆ ಮಂಡ್ಯದಿಂದ ಲೋಕಸಭೆ ಚುನಾವಣೆ, ರಾಮನಗರದಿಂದ ವಿಧಾನಸಭೆ ಚುನಾವಣೆ ಸ್ಪರ್ಧಿಸಿ ಸೋಲುಂಡಿದ್ದರು, ಇದೀಗ ಮೂರನೇ ಪ್ರಯತ್ನದಲ್ಲಿಯೂ ವಿಫಲ ಕಂಡಂತಾಗಿದೆ.
ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ವರ್ಸಸ್ ನಿಖಿಲ್ ಕುಮಾರಸ್ವಾಮಿ ಅನ್ನುವುದಕ್ಕಿಂತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವರ್ಸಸ್ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವಿನ ಪ್ರತಿಷ್ಠೆಯ ಕಣವಾಗಿ ಬಿಂಬಿತವಾಗಿತ್ತು. ಒಂದೆಡೆ ಪುತ್ರನಿಗೆ ರಾಜಕೀಯ ಭವಿಷ್ಯ ಕಟ್ಟಿಕೊಡುವ ಹಂಬಲದಲ್ಲಿದ್ದ ಎಚ್.ಡಿ.ಕುಮಾರಸ್ವಾಮಿ, ಸತತ ಮೂರನೇ ಬಾರಿಗೂ ವಿಫಲರಾಗಿದ್ದು, ತಮ್ಮನ್ನು ಸಿಎಂ ಮಾಡಿದ್ದ ಕ್ಷೇತ್ರವನ್ನೇ ಉಳಿಸಿಕೊಳ್ಳಲಾಗದ ಸ್ಥಿತಿಗೆ ಬಂದಂತಾಗಿದೆ.
ಇನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಸಹೋದರ ಡಿ.ಕೆ.ಸುರೇಶ್ ಸೋಲಿನ ಸೇಡು ತೀರಿಸಿಕೊಳ್ಳುವ ಜಿದ್ದಿನಲ್ಲಿದ್ದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಯೋಗೇಶ್ವರ್ ಅಭೂತಪೂರ್ವ ಗೆಲುವಿನ ಮೂಲಕ ಯಶಸ್ಸುಕಂಡಿದ್ದಾರೆ.
ಪರಿಣಾಮ ಬೀರದ ಝಮೀರ್ ಹೇಳಿಕೆ: ಚುನಾವಣಾ ಪ್ರಚಾರದ ವೇಳೆಯಲ್ಲಿ ಸಚಿವ ಝಮೀರ್ ಅಹ್ಮದ್ ಖಾನ್ ನೀಡಿದ್ದ ‘ಕರಿಯ’ ಹಾಗೂ ದೇವೇಗೌಡರ ಕುಟುಂಬ ಖರೀದಿ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಹೇಳಿಕೆಯಿಂದಲೇ ಯೋಗೇಶ್ವರ್ಗೆ ಸೋಲಾಗುತ್ತದೆ ಎನ್ನುವ ವಿಶ್ಲೇಷಣೆಗಳು ಸುಳ್ಳಾಗಿವೆ. ಝಮೀರ್ ಹೇಳಿಕೆ ಉಪ ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರಲಿಲ್ಲ. ಒಟ್ಟಾರೆಯಾಗಿ ಈ ಚುನಾವಣೆಯಲ್ಲಿ ಬಿಜೆಪಿ ಪ್ರಚಾರ ಹಾಗೂ ತಂತ್ರಗಾರಿಕೆಗಳು ಪರಿಣಾಮ ಫಲ ನೀಡಲಿಲ್ಲ.
ನಿರ್ಣಾಯಕ ಕ್ಷೇತ್ರದಲ್ಲೇ ಮುಗ್ಗರಿಸಿದ ನಿಖಿಲ್: ಎರಡು ಚುನಾವಣೆ ಸೋತಿದ್ದರ ಕುರಿತ ಅನುಕಂಪದ ಲೆಕ್ಕಾಚಾರವೂ ನಿಖಿಲ್ಗೆ ನಡೆಯಲಿಲ್ಲ. ಚನ್ನಪಟ್ಟಣ ಒಕ್ಕಲಿಗ ಸಮುದಾಯವೇ ನಿರ್ಣಾಯಕ ಎಂದು ಹೇಳಲಾಗುತ್ತಿತ್ತು. ಜತೆಗೆ ಜೆಡಿಎಸ್ನ ಪ್ರಭಾವವಿದ್ದರೂ ಕ್ಷೇತ್ರದಲ್ಲಿ ನಿಖಿಲ್ ಮುಗ್ಗರಿಸಿದ್ದಾರೆ. ಈ ಬಾರಿಯಂತೂ ತನ್ನ ತಂದೆ ಗೆದ್ದಿದ್ದ ಕ್ಷೇತ್ರದಲ್ಲಿ ಬಿಜೆಪಿಯ ಬೆಂಬಲದಿಂದ ಕಣಕ್ಕಿಳಿದೂ ಅವರಿಗೆ ಹೀನಾಯ ಸೋಲಾಗಿದೆ.
25,413 ಮತಗಳ ಅಂತರದ ಗೆಲುವು :
ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ 25,413 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಸಿ.ಪಿ.ಯೋಗೇಶ್ವರ್ಗೆ 1,12,642 ಮತ ದೊರೆತರೆ, ಎನ್ಡಿಎ ಅಭ್ಯರ್ಥಿ ನಿಖಿಲ್ಗೆ 87,229 ಮತಗಳು ದೊರೆತಿವೆ. ಪಕ್ಷೇತರ ಅಭ್ಯರ್ಥಿಗಳಾದ ನಿಂಗರಾಜುಗೆ 2352, ಜೆ.ಟಿ.ಪ್ರಕಾಶ್ಗೆ 1649 ಮತಗಳು ದೊರೆತಿದ್ದು, ರವಿ ಶಿವಪ್ಪ ಪಡಸಲಗಿಗೆ ಕೇವಲ 11 ಮತಗಳು ದೊರಕಿದ್ದು ಸ್ಪರ್ಧಾಳುಗಳ ಪೈಕಿ ಅತಿ ಕಡಿಮೆ ಮತ ಪಡೆದುಕೊಂಡಿದ್ದಾರೆ.