ಬಿ.ವೈ.ವಿಜಯೇಂದ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಕಾಂಗ್ರೆಸ್
ಬೆಂಗಳೂರು: ‘ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕುಟುಂಬದ ವಿರುದ್ಧ ಭ್ರಷ್ಟಾಚಾರದ ನೇರ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಬಿ.ವೈ.ವಿಜಯೇಂದ್ರ ತಮ್ಮ ಶಾಸಕ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಧರಣಿ ಸತ್ಯಾಗ್ರಹ ನಡೆಸಿದರು.
ಶುಕ್ರವಾರ ಇಲ್ಲಿನ ಆನಂದರಾವ್ ವೃತ್ತದಲ್ಲಿನ ಕಾಂಗ್ರೆಸ್ ಕಚೇರಿ ಬಳಿ ಧರಣಿ ನಡೆಸಿದ ಕಾರ್ಯಕರ್ತರು, ಶಾಸಕ ಯತ್ನಾಳ್ ಬಹಿರಂಗವಾಗಿ ಮಾಜಿ ಸಿಎಂ ಬಿಎಸ್‍ವೈ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ 40ಸಾವಿರ ಕೋಟಿ ರೂ.ಕೋವಿಡ್ ಹಗರಣದ ಆರೋಪ ಮಾಡಿದ್ದು, ಬಿಜೆಪಿ ಮುಖಂಡರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕೂಡಲೇ ಈ ಕುರಿತು ಸ್ಪಷ್ಟಣೆ ನೀಡಬೇಕು ಎಂದು ಒತ್ತಾಯಿಸಿದರು.
ಧರಣಿನಿರತರನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ದೇಶದಲ್ಲಿ ಬಿಜೆಪಿಯನ್ನು ವಿರೋಧಿಸುವ ವಿಪಕ್ಷಗಳ ವಿರುದ್ಧ ಸಿಬಿಐ, ಈಡಿ, ಐಟಿ ಮೂಲಕ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ. ಆದರೆ, ಬಿಜೆಪಿ ಮುಖಂಡರೇ 40 ಸಾವಿರ ಕೋಟಿ ರೂ.ಕೋವಿಡ್ ಹಗರಣ ನಡೆಸಿದ್ದಾರೆಂದು ಸ್ವತಃ ಬಿಜೆಪಿ ಶಾಸಕರೂ ಆರೋಪ ಮಾಡಿದ್ದರೂ ಈ ಬಗ್ಗೆ ಕೇಂದ್ರ ಬಿಜೆಪಿ ಮೌನವಹಿಸಿದೆ ಎಂದು ದೂರಿದರು.
ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಬೊಗಳೆಬಿಡುವ ಮೋದಿ ಈ ಬಗ್ಗೆ ಮೌನಕ್ಕೆ ಶರಣಾಗಿರುವುದು ಏಕೆ?, ಬಿಜೆಪಿ ಶಾಸಕ ಯತ್ನಾಳ್ ಈ ಹಿಂದೆ ಕೇಂದ್ರದ ಸಚಿವರಾಗಿದ್ದವರು. ಅವರೇ ಬಿಜೆಪಿ ವಿರುದ್ಧ ನೇರ ಆರೋಪ ಮಾಡಿರುವಾಗ ವಿಜಯೇಂದ್ರರನ್ನ ಯಾವ ಆಧಾರದ ಮೇಲೆ ಬಿಜೆಪಿ ಅಧ್ಯಕ್ಷರನ್ನಾಗಿ ಮುಂದುವರಿಸುತ್ತೀರಿ ಎಂಬುದನ್ನು ತಿಳಿಸಬೇಕು’ ಎಂದು ಮನೋಹರ್ ವಾಗ್ದಾಳಿ ನಡೆಸಿದರು.
ವಿಜಯೇಂದ್ರ ‘ಚಿಂದಿ ಚೋರ್’ ಎಂದು ಯತ್ನಾಳ್ ಹೇಳಿದ್ದರು. ಇದೀಗ ಅವರನ್ನೇ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ್ದು, ಈ ಭ್ರಷ್ಟಾಚಾರದದಲ್ಲಿ ಕೇಂದ್ರಕ್ಕೂ ಪಾಲು ಇದೆ ಎಂಬುದು ಈಗ ಸ್ಪಷ್ಟವಾಗಿದೆ. ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿರುವುದನ್ನು ಕಂಡು ಜನ ತಕ್ಕ ಉತ್ತರ ನೀಡಿದ್ದಾರೆ. ಭ್ರಷ್ಟಾಚಾರದ ಆರೋಪ ಹೊತ್ತಿರುವ ಯಡಿಯೂರಪ್ಪರನ್ನು ಪಕ್ಷದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಹೋರಾಟದಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಜನಾರ್ಧನ್, ಸುಧಾಕರ್ ರಾವ್, ಪರಿಸರ ರಾಮಕೃಷ್ಣ, ಹೇಮರಾಜ್, ಪ್ರಕಾಶ್, ಬಬಳೇಶ್, ಉಮೇಶ್, ಆನಂದ್, ಚಂದ್ರಶೇಖರ, ದರ್ಶನ್, ಪುಟ್ಟರಾಜು ಸಹಿತ ಇನ್ನಿತರರು ಪಾಲ್ಗೊಂದಿದ್ದರು.